ಬಂಟ್ವಾಳ, ಜೂ09: ಭಗವಂತನ ಅನುಗ್ರಹ ಪಡೆಯುವ ನಿಟ್ಟಿನಲ್ಲಿ ಪವಿತ್ರ ರಂಝಾನ್ ಉಪವಾಸಕ್ಕೆ ಹೆಚ್ಚು ಮಹತ್ವವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ಆಯೋಜನೆ ಮಾಡಲಾಗಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ಅವರು, ಸಾಮಾಜಿಕ ಸಾಮರಸ್ಯ ಮತ್ತು ಸೌಹಾರ್ದದ ಸಂಕೇತವಾಗಿ ಪ್ರತೀವರ್ಷ ಇಫ್ತಾರ್ ಕೂಟ ಏರ್ಪಡಿಸುತ್ತಿದ್ದೇವೆ. ಈ ಕಾರ್ಯಕ್ರಮದಲ್ಲಿ ಸರ್ವಧರ್ಮದ ಬಂಧುಗಳು ಭಾಗವಹಿಸುತ್ತಿದ್ದಾರೆ. ಸಾಮಾಜಿಕ ಸಾಮರಸ್ಯದ ಸಮಾಜ ಕಟ್ಟುವ ನಿಟ್ಟಿನಲ್ಲಿ ಎಲ್ಲರಿಗೂ ಭಗವಂತನ ಪ್ರೇರಣೆಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಜಿ.ಪಂ ಸದಸ್ಯರಾದ ಎಂ.ಎಸ್.ಮಹಮ್ಮದ್, ಪದ್ಮಶೇಖರ ಜೈನ್, ಸಾಹುಲ್ ಹಮೀದ್, ಯು.ಪಿ. ಇಬ್ರಾಹಿಂ, ಬಂಟ್ವಾಳ ತಾ.ಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ ಉಪಸ್ಥಿತರಿದ್ದರು.