ಬೆಂಗಳೂರು, ಜೂ09: ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುದ್ಧ ವಕೀಲರೊಬ್ಬರು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಪೇಜಾವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರವು ಗಂಗಾ ನದಿ ಶುದ್ಧೀಕರಣ ಯೋಜನೆ ಪೂರ್ಣಗೊಳಿಸಿಲ್ಲ ಹಾಗೂ ಕಪ್ಪು ಹಣ ತರುವಲ್ಲಿ ಸಹ ವಿಫಲವಾಗಿದೆ. ಈ ವಿಚಾರಗಳು ಮುಂದಿನ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿವೆ ಎಂದು ಜೂ.3 ರಂದು ಪೇಜಾವರ ಶ್ರೀಗಳು ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸಂಸದೆ ಶೋಭಾ, ಪೇಜಾವರ ಶ್ರೀಗಳು ಸನ್ಯಾಸಿ. ಅವರಿಗೆ ವಯಸ್ಸಾಗಿದೆ. ಶ್ರೀಗಳು ಟಿವಿ ನೋಡಿಲ್ಲ. ಹಾಗಾಗಿ ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಸಾಧನೆಗಳ ಬಗ್ಗೆ ಶ್ರೀಗಳಿಗೆ ತಪ್ಪು ಮಾಹಿತಿ ಬಂದಿದೆ ಎಂದು ತಿಳಿಸಿದ್ದರು.
ಬಿಜೆಪಿ ಸಂಸದರ ಈ ಹೇಳಿಕೆಯ ವಿರುದ್ಧ ವಕೀಲ ನಟರಾಜ್ ಶರ್ಮಾ ದೂರು ದಾಖಲಿಸಿದ್ದು, ಪೇಜಾವರ ಶ್ರೀಗಳ ಹೇಳಿಕೆ ಬಗ್ಗೆ ಸಂಸದೆ ಶೋಭಾ ಅಗೌರವಯುತವಾಗಿ ಪ್ರತಿಕ್ರಿಯಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ದೂರು ಸ್ವೀಕರಿಸಿರುವ ಪೊಲೀಸರು, ಈ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.