ಬೆಂಗಳೂರು, ಜೂ09: ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾಗೆ ಸಚಿವ ಸ್ಥಾನ ಕೊಡಬೇಕು ಎಂದು ಡಾ. ಜಿ ಪರಮೇಶ್ವರ್ ಮನೆ ಮುಂದೆ ಬೆಂಬಲಿಗರು ಧರಣಿ ನಡೆಸಿದ್ದಾರೆ.
ಐವನ್ ಡಿಸೋಜಾ ಬೆಂಬಲಿಗರು ಸದಾಶಿವ ನಗರದ ಡಿಸಿಎಂ ಪರಮೇಶ್ವರ್ ಮನೆ ಮುಂದೆ ಜಮಾಯಿಸಿದ್ದು, ಐವನ್ ಡಿಸೋಜಾಗೆ ಸಚಿವ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮಾತ್ರವಲ್ಲ, ಐವನ್ ಅವರಿಗೆ ಸಚಿವ ಸ್ಥಾನ ನೀಡಲು ಪರಮೇಶ್ವರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ರಾಜ್ಯದ ಜನಸಂಖ್ಯೆಯ ಶೇ. 4 ರಷ್ಟು ಕ್ರೈಸ್ತರು ಇದ್ದೇವೆ. ನಮ್ಮ ಸಮುದಾಯಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಕೇವಲ 2 ಟಿಕೆಟ್ ನೀಡಿದ್ದೀರಿ. ಕಾಂಗ್ರೆಸ್ಗೆ ನಮ್ಮ ಸಮುದಾಯದ ಬೆಂಬಲ ಇದೆ. ಹಾಗಾಗಿ ಐವನ್ ಡಿಸೋಜಗೆ ಸಚಿವ ಸ್ಥಾನ ನೀಡಬೇಕು ಎಂದು ಬೆಂಬಲಿಗರು ಮನವಿ ಮಾಡಿಕೊಂಡಿದ್ದಾರೆ.
ಐವನ್ ಡಿಸೋಜಾ ಬೆಂಬಲಿಗರ ಮನವಿ ಸ್ವೀಕರಿಸಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಪರಮೇಶ್ವರ್, ಐವನ್ ಡಿಸೋಜಾ ಇದೇ ಮೊದಲ ಬಾರಿ ಪರಿಷತ್ ಸದಸ್ಯರಾಗಿದ್ದಾರೆ. ಅವರನ್ನು ಈಗಾಗಲೇ ಪರಿಷತ್ ಮುಖ್ಯ ಸಚೇತಕರನ್ನಾಗಿ ಮಾಡಲಾಗಿದೆ. ಮುಂದೆ ಸಚಿವ ಸಂಪುಟ ವಿಸ್ತರಣೆ ವೇಳೆ ನೋಡೋಣ ಎಂದು ತಿಳಿಸಿದ್ದಾರೆ.