ಮಂಗಳೂರು, ಜೂ09: ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಶ್ರೀ ಕ್ಷೇತ್ರ ಮಂಗಳಾದೇವಿಯಲ್ಲಿರುವ ಬೃಹತ್ ಅಶ್ವತ್ಥ ಮರ ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಮಂಗಳೂರಿನ ಐತಿಹಾಸಿಕ ಶ್ರೀ ಮಂಗಳಾದೇವಿ ದೇವಸ್ಥಾನದ ಹೊರ ಅಂಗಣದಲ್ಲಿರುವ ಬೃಹತ್ ಅಶ್ವತ್ಥ ವೃಕ್ಷ ಏಕಾಏಕಿ ಉರುಳಿ ಬಿದ್ದಿದೆ. ಪರಿಣಾಮ ದೇವಾಲಯದ ಆವರಣದಲ್ಲಿದ್ದ 4 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸುರೇಖ(63), ಪ್ರವೀಣ್ ಸುವರ್ಣ (49), ನವೀನ್ (45), ತೇಜಸ್ವಿನಿ (20) ಎಂದು ಗುರುತಿಸಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಮತ್ತು ಸ್ಥಳೀಯರು ಸೇರಿದಂತೆ ಅಶ್ವಥ ವೃಕ್ಷದ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳಾದೇವಿ ದೇವಸ್ಥಾನ, ಮಂಗಳೂರಿನ ಬೋಳಾರ ಎಂಬಲ್ಲಿದ್ದು, ನಗರದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿದೆ. ಮಂಗಳಾದೇವಿ ದೇವಸ್ಥಾನದ ಪ್ರಧಾನ ದೇವತೆಯಾದ ಮಂಗಳಾಂಬೆಯಿಂದಲೇ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ಐತಿಹಾಸಿಕ ಕ್ಷೇತ್ರಗಳಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನವೂ ಒಂದಾಗಿದೆ.