ಮಂಗಳೂರು, ಜೂ08: ಮನೆಯಲ್ಲಿ ಮಲಗಿದ್ದ 12 ವರ್ಷದ ಬಾಲಕಿಯನ್ನು ಎಬ್ಬಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿರುವ ಘಟನೆ ನಗರದ ನಗರದ ಬಿಜೈನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ನಡೆದಿದೆ.
ಬಿಜೈ ಚರ್ಚ್ ರಸ್ತೆಯ ಅಭಿಮಾನ್ ಮ್ಯಾನ್ಶ್ನ್ ಅಪಾರ್ಟ್ಮೆಂಟಿನಲ್ಲಿ ಬ್ಯಾಂಕ್ ಅಧಿಕಾರಿ ಟಿ. ರವೀಂದ್ರ ಕುಮಾರ್ ಅವರ 12ರ ಹರೆಯದ ಪುತ್ರಿ ಪ್ರಶಂಸಾ ಅಮ್ಮ ಹೊರಗಡೆ ಹೋಗಿದ್ದ ವೇಳೆ ಮಲಗಿ ನಿದ್ದೆಗೆ ಶರಣಾಗಿದ್ದಳು. ಸಂಜೆ 4 ಗಂಟೆ ಸುಮಾರಿಗೆ ಮನೆಗೆ ಬಂದ ಬಾಲಕಿ ಮಲಗಿಕೊಂಡಿದ್ದಾಳೆ. ಕೆಲಸ ನಿಮಿತ್ತ 5 ಗಂಟೆ ಸುಮಾರಿಗೆ ತಾಯಿ ಹೊರಗಡೆ ಹೋಗಿದ್ದು ನಂತರ ಮನೆಗೆ ಮರಳಿದ ತಾಯಿ ಬಾಗಿಲು ಬಡಿದಿದ್ದಾರೆ. ಎಷ್ಟು ಬಡಿದರೂ ಬಾಗಿಲು ತೆಗೆಯದಿದ್ದರಿಂದ ಆಕೆ ಗಂಡನಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ. ತಂದೆ-ತಾಯಿ ಇಬ್ಬರು ಎಷ್ಟು ಸಲ ಮಗಳನ್ನು ಎಬ್ಬಿಸಲು ಪ್ರಯತ್ನಿಸಿದರು ಸಾಧ್ಯವಾಗಲಿಲ್ಲ.
ಇದರಿಂದ ಆತಂಕಗೊಂಡ ಮನೆಮಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಆಗಮಿಸಿ ಕಾರ್ಯಾಚರಣೆ ಶುರು ಮಾಡಿದ್ದಾರೆ. ಮನೆಗೆ ಬಂದ ಅವರು ನಾನಾ ಪ್ರಯತ್ನಗಳು ಮಾಡಿದ್ದು ಕೊನೆಗೆ ಬಾಲ್ಕನಿಯಿಂದ ಮನೆ ಒಳಗೆ ಹೋಗಿ ಮುಂಭಾಗದ ಬಾಗಿಲನ್ನು ತೆರೆದಿದ್ದಾರೆ. ಒಳ ಬಂದ ಪೋಷಕರು ಮಗಳನ್ನು ಎಬ್ಬಿಸಿದ್ದಾರೆ. ಮಗಳು ಗಾಢವಾಗಿ ನಿದ್ರೆಗೆ ಜಾರಿದ್ದರಿಂದ ಈ ಘಟನೆ ಸಂಭವಿಸಿದೆ.
ಬಾಲಕಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಮುಖ್ಯಸ್ಥ ಶಿವಶಂಕರ್ ಹೇಳಿದ್ದಾರೆ