ಬಾಗಲಕೋಟೆ, ಜೂ08: ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್ ಪಕ್ಷದಲ್ಲಿ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಬಾದಾಮಿ ಕ್ಷೇತ್ರದ ಹಿರೆಮುಚ್ಚಳಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲ ಶಾಸಕರಿಗೆ ಸಚಿವ ಸ್ಥಾನ ಸಿಗದಿರೋದಕ್ಕೆ ಅಸಮಾಧಾನ ಇರೋದು ನಿಜ. ಆದರೆ ನಾವು ಎಲ್ಲರನ್ನು ಮನವೊಲಿಸುತ್ತೇವೆ. ಪಕ್ಷದಲ್ಲಿರುವ ಗೊಂದಲಗಳನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದಾರೆ.
ಎಂ. ಬಿ. ಪಾಟೀಲ ನನ್ನ ಭೇಟಿಯಾಗಿದ್ದು ನಿಜ. ನಾವಿಬ್ಬರು ಮಾತನಾಡಿದ್ದೇವೆ. ಆದರೆ ಎಂ. ಬಿ. ಪಾಟೀಲ ಕಣ್ಣೀರು ಹಾಕಿಲ್ಲ. ನಾನು ಅವರನ್ನು ಸಮಾಧಾನ ಮಾಡಿದ್ದೇನೆ. ಈ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂದು ತಿಳಿಸಿದರು.
ನಮಗೆ ರಾಜಕೀಯದಲ್ಲಿ ಬಿಜೆಪಿ ಪಕ್ಷವೇ ಮೊದಲ ವೈರಿ. ಬಿಜೆಪಿ ಪಕ್ಷದವರು ಮೊದಲು ತಮ್ಮಲ್ಲಿರುವ ಅಸಮಾಧಾನವನ್ನು ಸರಿಪಡಿಸಿಕೊಳ್ಳಲಿ. ನಮ್ಮ ಪಕ್ಷದಲ್ಲಿ ಸಚಿವ ಸ್ಥಾನ ಸಿಗದಿರೋದಕ್ಕೆ ಅಸಮಾಧಾನ ಇರೋದು ನಿಜ. ಆದರೆ ನಾವು ಎಲ್ಲರನ್ನು ಮನವೊಲಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.