ಮಂಗಳೂರು, ಜೂ.08: ಕರಾವಳಿಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ಮುಂಜಾಗೃತಾ ಕ್ರಮವಾಗಿ ಇಂದು ಮತ್ತು ನಾಳೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕರಾವಳಿಯಲ್ಲಿ ನಿನ್ನೆ ರಾತ್ರಿಯಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಈ ನಿರ್ಣಯ ತೆಗೆದುಕೊಂಡಿದ್ದಾರೆ. ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ದಟ್ಟ ಮೋಡ ಆವರಿಸಿದ್ದು, ದಿನವಿಡೀ ಮಳೆ ಆಗುವ ಸಾಧ್ಯತೆ ಇದೆ. ಮಾತ್ರವಲ್ಲ, ಹವಾಮಾನ ಇಲಾಖೆ ಜೂ.10ರವರೆಗೆ ಕರಾವಳಿಯಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ನೀಡಿದೆ.
ಜೂನ್ 7 ಮತ್ತು 8 ರಂದು ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದ್ದು ಹೈ ಅಲರ್ಟ್ ಘೋಷಿಸಿದೆ. ಹವಾಮಾನ ಇಲಾಖೆಯ ಎಚ್ಚರಿಕೆಯ ಪ್ರಕಾರ ಮುಂದಿನ 5 ದಿನಗಳ ಕಾಲ ಕರ್ನಾಟಕದ ಕರಾವಳಿ ಪ್ರದೇಶ, ಕೇರಳ, ಗೋವಾ , ಮಹಾರಾಷ್ಟ್ರ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಸಂಬಂಧ ವಿಶೇಷವಾಗಿ ಕೇಂದ್ರ ಹವಾಮಾನ ಇಲಾಖೆ ಕರ್ನಾಟಕದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಕರ್ನಾಟಕದ ಕರಾವಳಿಯಲ್ಲಿ ಎಚ್ಚರ ವಹಿಸುವಂತೆ ತಿಳಿಸಿದೆ.
ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ಮುಂಜಾಗ್ರತೆಗಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಇಂದು ಮತ್ತು ನಾಳೆ ರಜೆ ಘೋಷಿಸಿದ್ದಾರೆ.