ಕುಂದಾಪುರ, ಜೂ 07: ಬೈಂದೂರು ಸಮೀಪದ ತೀರಾ ಗ್ರಾಮೀಣ ಪ್ರದೇಶಗಳದಾ ಹೆನ್ಬೇರ್, ಗೋಳಿಬೇರು, ದೊಂಬೆ, ಮುದ್ದೊಡಿ ಭಾಗಕ್ಕೆ ಸಂಚರಿಸುತ್ತಿದ್ದ ಬಸ್ನ್ನು ಏಕಾಏಕಿ ಸಂಚಾರ ಸ್ಥಗಿತಗೊಳಿಸಿರುವುದು ಖಂಡನಾರ್ಹ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ತಕ್ಷಣ ನಾನು ಕೆಎಸ್.ಆರ್.ಟಿ.ಸಿ ಡಿಸಿ ಅವರನ್ನು ಸಂಪರ್ಕಿಸಿದ್ದೇನೆ. ಆಗ ಅವರು ಆ ಮಾರ್ಗಕ್ಕೆ ಬಸ್ ಓಡಿಸಲು ಪರ್ಮಿಟ್ ಇಲ್ಲ, ಲೋಕಾಯುಕ್ತದಲ್ಲಿ ದೂರು ಇದೆ. ಹಾಗಾಗಿ ಬಸ್ ನಿಲ್ಲಿಸಿದ್ದಾಗಿ ಹೇಳಿದ್ದಾರೆ. ಹಾಗಾದರೆ ಚುನಾವಣಾ ಸಂದರ್ಭದಲ್ಲಿ ಪರವಾನಿಗೆ ಇಲ್ಲದೇ ಬಸ್ ಓಡಿಸಿದ್ದೇಕೆ? ಚುನಾವಣೆ ಗಿಮಿಕ್ಗಾ? ಈಗ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಹೊಣೆ ಯಾರು ಎಂದು ಬೈಂದೂರು ಕ್ಷೇತ್ರದ ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.
ಬೈಂದೂರು ಬಿಜೆಪಿ ಕಛೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಬಸ್ ಓಡಿಸಲು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹೇಳಿದ್ದೇನೆ. ಖಾಸಗಿ ಬಸ್ನವರ ಜೊತೆಗೂ ಈ ಬಗ್ಗೆ ಮಾತನಾಡಿದ್ದೇನೆ. ತಕ್ಷಣ ಈ ಮಾರ್ಗದಲ್ಲಿ ಬದಲಿ ವ್ಯವಸ್ಥೆ ಆಗುತ್ತದೆ ಎಂದು ಅವರು ಹೇಳಿದರು.
ಈಗಾಗಲೇ ಕೊಲ್ಲೂರು, ವಂಡ್ಸೆ ಶಂಕರನಾರಾಯಣ ಮಧ್ಯೆ ಸಂಚರಿಸುತ್ತಿದ್ದ ಹನುಮಾನ್ ಸಂಸ್ಥೆಯ ಬಸ್ ಸಂಚಾರ ನಿಲ್ಲಿಸಿದ್ದರಿಂದ ಜನರಿಗೆ ತುಂಬಾ ತೊಂದರೆಯಾಗಿತ್ತು. ಈ ಬಗ್ಗೆ ಕೊಂಡಳ್ಳಿ, ಬೈಲೂರು ಭಾಗದ ಜನ ನನಗೆ ಮನವಿ ನೀಡಿದರು. ಕೂಡಲೇ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಈ ಮಾರ್ಗಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಹೇಳಿದ್ದೇನೆ ಎಂದರು. ಇನ್ನು ಬೈಂದೂರಿನಲ್ಲಿ ಸರ್ಕಾರಿ ಬಸ್ ನಿಲ್ದಾಣಕ್ಕೆ ಟೆಂಡರ್ ನೋಟಿಫಿಕೇಶನ್ ಆಗದೇ ಗುದ್ದಲಿ ಪೂಜೆ ಮಾಡಲು ಅವಕಾಶವಿದೆಯೇ? ಗಡಿಬಿಡಿಯಲ್ಲಿ ಗುದ್ದಲಿ ಪೂಜೆ ಮಾಡಿದ್ದು ಏಕೆ? ಈ ಬಗ್ಗೆ ಕೆಎಸ್ಆರ್ಟಿಸಿ ಮೇಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.
ನೀತಿ ಸಂಹಿತೆಯ ನೆಪದಲ್ಲಿ ದೀನ್ದಯಾಳ್ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವುದು ಕೂಡಾ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ಚರ್ಚೆ ಮಾಡಿದ್ದೇನೆ. ವಿದ್ಯುತ್ ಸಂಪರ್ಕ ಮಾಡಲು ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಅಧಿಕಾರಿಗಳೇ ಹೇಳಿದ್ದಾರೆ ಎಂದು ತಿಳಿಸಿದರು. .ತಲ್ಲೂರಿನಿಂದ ಶಿರೂರು ತನಕ ಐಆರ್ಬಿ ಕಾಮಗಾರಿಯಿಂದಾಗುವ ತೊಂದರೆಗಳನ್ನು ಗಮನಿಸಿದ್ದೇನೆ. ತಲ್ಲೂರು, ಜಾಲಾಡಿ, ಹೆಮ್ಮಾಡಿ ಭಾಗದಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಣ್ಣು ಕೃಷಿಭೂಮಿಗೆ ಹೋಗಿ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಒತ್ತಿನಣೆ ಗುಡ್ಡ ಈ ಬಾರಿಯೂ ಕುಸಿಯುವ ಭೀತಿ ಇದೆ. ಈ ಬಗ್ಗೆ ಮುಂಜಾಗೃತ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.
ಬಿಜೂರು ಮಣಿಯಾಣಿ ರಸ್ತೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದನ್ನು ಇಂಜಿನಿಯರ್ಗೆ ತಿಳಿಸಿದ್ದೇನೆ. ತಕ್ಷಣ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು, ಅದು ಅಧಿಕಾರಿಗಳ ಜವಾಬ್ದಾರಿ, ಕೊಲ್ಲೂರಿನಲ್ಲಿ 72 ಕೋಟಿ ವೆಚ್ಚದಲ್ಲಿ ಒಳಚರಂಡಿ, ಕುಡಿಯುವ ನೀರು ಯೋಜನೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ. ನಿರೀಕ್ಷಿತ ಪ್ರಗತಿಯಾಗಿಲ್ಲ, ದೇವಸ್ಥಾನದ ಹಣ ಪೋಲಾಗಬಾರದು ಎಂದ ಅವರು, ಕ್ಷೇತ್ರದ ಕೆಲವು ಶಾಲೆಗಳು ಬೀಳುವ ಸ್ಥಿತಿಯಲ್ಲಿದೆ. ಬೋಳಂಬಳ್ಳಿ, ಕಪ್ಪಾಡಿ ಮೊದಲಾದ ಶಾಲೆಗಳನ್ನು ನೋಡಿದ್ದೇನೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಎಸ್.ಡಿ.ಎಮ್.ಸಿ ಅಮೂಲಾಗ್ರ ಬದಲಾವಣೆ ಆಗಬೇಕು. ಶಿಕ್ಷಣದ ಬಗ್ಗೆ ಅರಿವು ಇರುವವರಿಗೆ ಶಾಲಾಭಿವೃದ್ದಿ ಮೇಲುಸ್ತುವಾರಿಯಲ್ಲಿ ಜವಾಬ್ದಾರಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯರಾದ ಶಂಕರ ಪೂಜಾರಿ, ಬಾಬು ಶೆಟ್ಟಿ, ಬಿಜೆಪಿ ಮಂಡಲದ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ರೈತ ಮೋರ್ಚಾದ ಅಧ್ಯಕ್ಷ ಹರ್ಕೂರು ಚಿತ್ತರಂಜನ್ ಶೆಟ್ಟಿ, ಸದಾಶಿವ ಪಡುವರಿ ಉಪಸ್ಥಿತರಿದ್ದರು