ಮುಂಬೈ ಆಸ್ಪತ್ರೆಯಲ್ಲಿ ತೂಕ ಕಳೆದುಕೊಳ್ಳುವ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಿಶ್ವದ ದಡೂತಿ ಮಹಿಳೆ ಎಮನ್ ಅಹ್ಮದ್ ಅವರು ನಿಧನ ಹೊಂದಿದ್ದಾರೆಂದು ಸೋಮವಾರ ತಿಳಿದುಬಂದಿದೆ. ಜಗತ್ತಿನ ಅತಿ 'ತೂಕದ ಮಹಿಳೆ' ಎಂಬ ಖ್ಯಾತಿಗೆ ಪಾತ್ರರಾಗಿದ್ದ ಈಜಿಪ್ಟ್ನ ಎಮಾನ್ ಹೃದಯದ ಕಾಯಿಲೆ ಮತ್ತು ಮೂತ್ರಪಿಂಡಗಳ ನಿಷ್ಕ್ರಿಯತೆಯಿಂದಾಗಿ ಬೆಳಗಿನ ಜಾವ 4:53ರ ವೇಳೆಗೆ ಮೃತಪಟ್ಟಿದ್ದಾರೆ. ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯ ವೈದ್ಯರು ಈ ವಿಷಯ ಪ್ರಕಟಿಸಿದ್ದಾರೆ.
ಬಾಲ್ಯದಿಂದಲೂ ಅತಿ ತೂಕದ ಸಮಸ್ಯೆಯಿಂದ ಬಳಲುತ್ತಿದ್ದ ಎಮಾನ್ ಇತ್ತೀಚೆಗೆ ತಮ್ಮ ದೇಹದ ತೂಕ 500 ಕೆ.ಜಿ ತಲುಪಿದಾಗ ಚಿಕಿತ್ಸೆಗಾಗಿ ಮುಂಬಯಿಗೆ ಆಗಮಿಸಿದ್ದರು.ಚಿಕಿತ್ಸೆ ಬಳಿಕ ಎಮನ್ ಕುಟುಂಬಸ್ಥರು ಭಾರತೀಯ ವೈದ್ಯರ ವಿರುದ್ಧವೇ ಗಂಭೀರ ಆರೋಪಗಳನ್ನು ಮಾಡಿದ್ದರು. ಎಮನ್'ಳನ್ನು ಶಿಫ್ಟ್ ಮಾಡುವ ವೇಳೆಯೂ ಭಾರತೀಯ ವೈದ್ಯರು ಎಚ್ಚರಿಕೆಯನ್ನು ನೀಡಿದ್ದರು. ಇದು ಅಪಾಯದ ಸಂಕೇತ ಎಂತಲೂ ಹೇಳಿದ್ದರು ಆದರೆ ಆ ಬಳಿಕ ಮೇ.4 ರಂದು ಮತ್ತೆ ಅಬುಧಾಬಿಗೆ ಎಮನ್'ಳನ್ನು ವಾಪಸ್ ಕರೆದೊಯ್ಯಲಾಗಿತ್ತು. ಮುಂಬೈನಿಂದ ಅಬುಧಾಬಿಗೆ ಆಗಮಿಸಿದ ಬಳಿಕ ಎಮನ್ ಅವರ ಆರೋಗ್ಯದ ಮೇಲೆ 20 ವೈದ್ಯರ ತಂಡ ನಿಗಾ ಇರಿಸಿತ್ತು ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ದಿನಗಳ ಹಿಂದಷ್ಟೇ ಎಮನ್ ತನ್ನ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.ಆದ್ರೆ ವೈದ್ಯಲೋಕಕ್ಕೆ ಸವಾಲಾಗಿದ್ದ ಎಮನ್ ಇಂದು ಚಿರನಿದ್ರೆಗೆ ಜಾರಿದ್ದಾರೆ.