ಮಂಗಳೂರು, ಜೂ07: ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಪಡುಶೆಡ್ಡೆಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಘಟಕದಿಂದ ಹತ್ತು ಗ್ರಾಮಗಳಿಗೆ ಕೊಳಚೆ ನೀರು ಪೂರೈಕೆಯಾಗುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಹತ್ತು ವರ್ಷಗಳ ಹಿಂದೆ ಮಂಗಳೂರು ಮನಪಾ ವ್ಯಾಪ್ತಿಯ ಕೆಳವು ಪ್ರದೇಶಗಳ ಡ್ರೈನೇಜ್ ನೀರು ಸಂಸ್ಕರಣ ಘಟಕವನ್ನು ಮೂಡುಶೆಡ್ಡೆ ಗ್ರಾಮದಲ್ಲಿ ನಿರ್ಮಿಸಲಾಗಿತ್ತು. ಇಲ್ಲಿರುವ ನೀರು ಸಂಸ್ಕರಣ ಘಟಕದಲ್ಲಿ ಮೂರು ಹಂತಗಳಲ್ಲಿ ನೀರು ಸಂಸ್ಕರಣಾ ಕಾರ್ಯ ನಡೆಯುತ್ತದೆ. ಮೊದಲ ಮತ್ತು ಎರಡನೇ ಹಂತದ ಸಂಸ್ಕರಣೆಯಲ್ಲಿ ಯಾಂತ್ರಿಕ ಅಥವಾ ತಾಂತ್ರಿಕ ದೋಷ ಉಂಟಾದಾಗ, ನೀರನ್ನು ನೇರವಾಗಿ ಪಕ್ಕದಲ್ಲಿರುವ ಹಳ್ಳಕ್ಕೆ ಬಿಡಲಾಗುತ್ತದೆ. ಹಳ್ಳದಿಂದ ಕೊಳಚೆ ನೀರು ನೇರವಾಗಿ ಗುರುಪುರ ನದಿಗೆ ಸೇರುತ್ತದೆ. ನದಿಗೆ ಸೇರಿದ ಕೊಳಚೆ ನೀರು ಬಹುಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಕಟೀಲು, ಕುಂಜತ್ ಬೈಲು, ಕಾವೂರು, ಮರಕಡ, ಅದ್ಯಪಾಡಿ ಹೀಗೆ ಅನೇಕ ಗ್ರಾಮದ ಜನರ ಹೊಟ್ಟೆ ಸೇರುತ್ತಿದೆ.
ಕಲುಷಿತ ನೀರನ್ನು ತೋಡಿಗೆ ಬಿಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಯೂ ಕ್ರಮಕೈಗೊಂಡಿಲ್ಲ. ಮಾತ್ರವಲ್ಲ, ಇಲ್ಲಿ ಹರಿಯುತ್ತಿರುವ ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು ಜನ ನಡೆದಾಡಲೂ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಜವಾಬ್ದಾರಿ ಇಲ್ಲದೆ ವರ್ತಿಸುತ್ತಿರುವುದರಿಂದ ಕಲುಷಿತ ನೀರು ಹತ್ತು ಗ್ರಾಮದ ಜನರಿಗೆ ಪೂರೈಕೆಯಾಗುತ್ತಿದೆ. ಈ ಬಗ್ಗೆ ಯಾವುದೇ ಅರಿವಿರದೇ ಜನರು ಅದೇ ನೀರನ್ನು ಶುದ್ಧ ನೀರು ಅಂತ ತಿಳಿದುಕೊಂಡು ಕುಡಿಯುತ್ತಿದ್ದಾರೆ.
ಇದೀಗ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಂಡು ಶುದ್ಧ ಸ್ವಚ್ಛ ಕುಡಿಯುವ ನೀರು ಪೂರೈಕೆ ಮಾಡಬೇಕು ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸಿ ಕೊಡಬೇಕು ಎನ್ನುವ ಆಗ್ರಹ ಕೂಡ ಕೇಳಿಬರುತ್ತಿದೆ.