ಕುಂದಾಪುರ, ಜೂ 07 : ಮುದಿ ವಯಸ್ಸಿನ ಹೆತ್ತವರ ಆಸ್ತಿ ದೊರಕಿದ ನಂತರ ಅವರನ್ನು ದೂರ ಮಾಡುವ ಮಕ್ಕಳಿಗೆ ಕುಂದಾಪುರದ ಸಹಾಯಕ ಕಮಿಷನರ್ ತಕ್ಕ ಪಾಠ ಕಲಿಸಿದ್ದಾರೆ. ಆಸ್ತಿ ಸಿಕ್ಕಿದ ಬಳಿಕ ಹೆತ್ತವರನ್ನು ದೂರ ಮಾಡಿರುವ ಉಡುಪಿ ಜಿಲ್ಲೆಯ ನಾಲ್ವರ ಹೆಸರಿನಲ್ಲಿದ್ದ ಆಸ್ತಿಯನ್ನು ಮರಳಿ ಹೆತ್ತವರ ಹೆಸರಿಗೆ ಮಾಡಲು ಆದೇಶ ನೀಡಿದ್ದಾರೆ.
ಉಡುಪಿ ಜಿಲ್ಲಾ ಹಿರಿಯ ನಾಗರಿಕ ಯೋಗಕ್ಷೇಮ ನಿರ್ವಹನಾ ಸಮಿತಿಯ ಅಧ್ಯಕ್ಷರೂ, ಆದ ಕುಂದಾಪುರದ ಸಹಾಯಕ ಕಮಿಷನರ್ ಟಿ. ಭೂಬಾಲನ್ ಅವರು ಉಡುಪಿಯ ಸಂತೆಕಟ್ಟೆ, ಕುರ್ಕಾಲು ಕುಂದಾಪುರ ಬೈಂದೂರಿನ ನಾಲ್ವರ ಮೇಲೆ ತಕ್ಕುದಾದ ಕ್ರಮ ಕೈಗೊಂಡಿದ್ದಾರೆ.
ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದಿರುವುದು, ತಂದೆ ತಾಯಿಗೆ ಊಟ ತಿಂಡಿ ಇಲ್ಲದಂತೆ, ಮನೆ ಮಠ ಇಲ್ಲದಂತೆ ಮಾಡುವ ಮಕ್ಕಳ ಮೇಲೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ ಮಾಸಿಕ ಭತ್ಯೆ ನೀಡುವಂತೆ ಆದೇಶ ನೀಡಲಾಗುತ್ತದೆ. ಈ ರೀತಿಯ ಸುಮಾರು 30 ಪ್ರಕರಣಗಳಲ್ಲಿ ತೀರ್ಪು ನೀಡಲಾಗಿದೆ. ಆದರೆ ಆಸ್ತಿಗಾಗಿ ಹೆತ್ತವರ ಜತೆಗಿದ್ದು, ಆಸ್ತಿ ಬಂದ ಬಳಿಕ ಹೆತ್ತವರನ್ನು ಅಥವಾ ಆಸ್ತಿ ಬರೆಯಿಸಿಕೊಂಡ ಬಳಿಕ ಹೆತ್ತವರನ್ನು ಬೀದಿಗೆ ತಳ್ಳಿದ ಪ್ರಕರಣಗಳು ಕಂಡಬಂದರೆ ಆಸ್ತಿಯನ್ನು ಅಂತಹ ಮಕ್ಕಳ ಹೆಸರಿನಿಂದ ರದ್ದುಗೊಳಿಸಿ, ಮರಳಿ ಹೆತ್ತವರ ಹೆಸರಿಗೆ ವರ್ಗಾವಣೆ ಮಾಡಿಸಲಾಗುವುದು. ಈ ಆದೇಶವನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಿ ದಾಖಲೆಗಳಲ್ಲಿ ಕೂಡಾ ನಮೂದಿಸುವಂತೆ ಮಾಡಲಾಗುವುದು ಎಂದು ಟಿ. ಭೂಬಾಲನ್ ಹೇಳಿದ್ದಾರೆ