ಬೆಂಗಳೂರು, ಜೂ 06: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಮಾಜಿ ಸಚಿವ ಎಂ.ಬಿ. ಪಾಟೀಲ್ ,ಶಾಸಕ ಅಜಯ್ ಸಿಂಗ್, ಮಾಜಿ ಶಾಸಕ ಸತೀಶ್ ಜಾರಕಿಹೊಳೆ, ಸಿ.ಎಸ್. ಶಿವಳ್ಳಿ, ಬಿ.ಸಿ. ಪಾಟೀಲ್, ಬಸವರಾಜ್ ಹೊರಟ್ಟಿ ಅವರ ಬೆಂಬಲಿಗರು, ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆಯಲ್ಲಿ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಬಿ.ಸಿ ಪಾಟೀಲ್ ಅವರು ತಾನು ಪಕ್ಷಕ್ಕಾಗಿ ಪ್ರಮಾಣಿಕವಾಗಿ ಕೆಲಸ ಮಾಡಿದರೂ ಅದಕ್ಕೆ ತಕ್ಕುದಾದ ಪ್ರತಿಫಲ ಸಿಕ್ಕಿಲ್ಲ. ಬಿಜೆಪಿಯವರು ಸಚಿವ ಸ್ಥಾನ, ಆಸೆ ಆಮಿಷ ಒಡ್ಡಿದ್ರೂ, ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಆದರೆ ನನಗೆ ನ್ಯಾಯವಾಗಿ ಸಿಗಬೇಕಾದ ಸ್ಥಾನ ಸಿಕ್ಕಿಲ್ಲ. ಇದರಿಂದ ನನಗೆ ಮತ್ತು ನನ್ನ ಬೆಂಬಲಿಗರಿಗೆ ನೋವಾಗಿದೆ ಎಂದು ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಶಾಸಕ ಅಜಯ್ ಸಿಂಗ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಜೇವರ್ಗಿಯಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.