ಉಡುಪಿ, ಜೂ 06: ಮಂಗಳೂರಿನ ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಅವರ ಅಸಹಜ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರದ ಕುಮ್ಮಕ್ಕಿನ ಮೇರೆಗೆ ಸಂಘ ಪರಿವಾರದ , ಹಾಗೂ ಅಮಾಯಕ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿ ಬಂಧಿಸಿ ಹಿಂಸಿಸಲಾಗುತ್ತಿದೆ. ನಮ್ಮ ಕಾರ್ಯಕರ್ತರು ಕಾನೂನು ರೀತಿಯಲ್ಲಿ ಕೆಲಸ ಮಾಡಿದ್ದಾರೆ. ಹುಸೇನಬ್ಬ ಸಾವಿಗೆ ಸಂಬಂಧಿಸಿದ ಮರಣೋತ್ತರ ವರದಿ ಬರುವವರೆಗೆ ನಮ್ಮ ಕಾರ್ಯಕರ್ತರ ಬಂಧನವನ್ನು ನಿಲ್ಲಿಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಜೂ ೬ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ದನದ ವ್ಯಾಪಾರಿ ಹುಸೈನಬ್ಬರ ಮೇಲೆ ನಮ್ಮ ಕಾರ್ಯಕರ್ತರು ದಾಳಿ ನಡೆಸಿಲ್ಲ. ಕಾನೂನು ಕೈಗೆತ್ತಿಕೊಳ್ಳದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಕರ್ತವ್ಯವನ್ನು ಅವರು ಮಾಡಿದ್ದಾರೆ. ಆದರೆ ಪ್ರಕರಣವನ್ನು ಸಂಘಟನೆಗೆ ತಗುಲಿಸುವ ಕೆಲವಾಗುತ್ತಿದೆ. ಹುಸೇನಬ್ಬ ಪೊಲೀಸ್ ಕಸ್ಟಡಿಯಲ್ಲಿ ಸತ್ತಿರುವುದರಿಂದ ಇದು ಸಹಜವಾಗಿ ಸಿಐಡಿ ತನಿಖೆಗೆ ಹೋಗುತ್ತದೆ. ಸಿಐಡಿಯಿಂದ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ನಮಗೆ ಇಲ್ಲ. ಫಾರೆನ್ಸಿಕ್ ವರದಿ ಬರುವವರೆಗೆ ಕಾಯುತ್ತೇವೆ. ಈ ವರದಿಯಲ್ಲಿ ಹುಸೇನಬ್ಬ ಹೃದಯಾಘಾತದಿಂದ ಸಾವಿನಪ್ಪಿರುವುದಾಗಿ ಬಂದರೆ ಈ ಪ್ರಕರಣದಲ್ಲಿ ಯಾವುದೇ ಸತ್ಯಾಂಶ ಉಳಿಯುವುದಿಲ್ಲ ಎಂದರು .
ಇದೇ ವೇಳೆ ಮಾತನಾಡಿದ ಶಾಸಕ ಕೆ.ರಘುಪತಿ ಭಟ್ ರಾಜ್ಯದ ಅಧೀನದಲ್ಲಿರುವ ಸಿಐಡಿಗೆ ತನಿಖೆ ಮಾಡಲು ಈ ಪ್ರಕರಣವನ್ನು ಒಪ್ಪಿಸಿದರೆ ಇನ್ನಷ್ಟು ಅಮಾಯಕರ ಕಾರ್ಯಕರ್ತರ ಬಂಧನ ಆಗುವ ಸಾಧ್ಯತೆ ಇದೆ.ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದರು.