Karavali
ಉಡುಪಿ: ಈ ಸರ್ಕಾರಿ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಏರಿಕೆಯಾಗುತ್ತಲೇ ಇದೆ..!
- Wed, Jun 06 2018 02:03:09 PM
-
ಉಡುಪಿ, ಜೂ06: ಗುಣಮಟ್ಟದ ಶಿಕ್ಷಣ, ಮಕ್ಕಳ ಸರ್ವಾಂಗೀಣ ವಿಕಸಕ್ಕೆ ಒತ್ತು, ಪಠ್ಯೇತರ ಚಟುವಟಿಕೆಗಳಿಗೆ ವಿಫುಲ ಅವಕಾಶ, ಖಾಸಗಿ ಶಾಲೆಗಿಂತಲೂ ಉತ್ತಮ ಕಾರ್ಯನಿರ್ವಹಣೆಯ ಮೂಲಕ ರಾಜ್ಯದ ಗಮನ ಸೆಳೆದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೇ ಕುವೆಂಪು ಶತಮಾನೋತ್ಸವ ಸ.ಮಾ.ಹಿ.ಪ್ರಾ.ಶಾಲೆ ತೆಕ್ಕಟ್ಟೆ. ಈ ಶಾಲೆಯಲ್ಲಿ ಖಾಸಗಿ ಶಾಲೆಗಿಂತಲೂ ಉತ್ತಮ ಕಲಿಕಾ ವಾತಾವರಣವಿದೆ. ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿಭಾಗಗಳಿವೆ. ನುರಿತ ಬೋಧಕರ ತಂಡವೇ ಇದೆ. ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ ಪಟ್ಟಣ ಪ್ರದೇಶದ ಈ ಶಾಲೆ.
ಸರ್ಕಾರಿ ಶಾಲೆ ಎಂದಾಗ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿರುವುದು ವಾಸ್ತವದ ಸರ್ವೇ ಸಹಜ ಅಂಶ. ಆದರೆ ಈ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಳ ವಾಗುತ್ತಲೆ ಇದೆ. ಈ ವರ್ಷ ಒಂದೇ ದಿನಕ್ಕೆ 100 ಮಕ್ಕಳು ಪ್ರವೇಶಾತಿ ಪಡೆಯುವ ಮೂಲಕ ಶಾಲೆ ದಾಖಲೆಯನ್ನೇ ನಿರ್ಮಿಸಿದೆ. ಪ್ರಸ್ತುತ ಈ ಶಾಲೆಯಲ್ಲಿ 493 ಮಕ್ಕಳು ಕಲಿಯುತ್ತಿದ್ದಾರೆ. ಈ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ೫೦೦ಕ್ಕೆ ಏರಿಸುವುದು ಶಾಲೆಯ ಗುರಿ.
ತೆಕ್ಕಟ್ಟೆಯ ಸುತ್ತಮುತ್ತ ಆನೇಕ ಖಾಸಗಿ ಶಾಲೆಗಳು ಇವೆ. ಆದರೂ ಕೂಡಾ ಈ ಶಾಲೆಯ ಖ್ಯಾತಿಯಿಂದ ಗುಣಮಟ್ಟದ ಶಿಕ್ಷಣದ ಕಲಿಕಾ ವಿಧಾನದಿಂದ ಪೋಷಕರು ಇಷ್ಟಪಟ್ಟು ಈ ಶಾಲೆಗೆ ಮಕ್ಕಳನ್ನು ಸೇರ್ಪಡೆ ಮಾಡುತ್ತಿರುವುದು ಕಾಣಬಹುದಾಗಿದೆ. ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿರುವುದು ಕಂಡು ಬರುತ್ತಿದೆ. ತೆಕ್ಕಟ್ಟೆಯ ಈ ವಿದ್ಯಾದೇಗುಲದ ಖ್ಯಾತಿ ಮತ್ತು ವಿಶೇಷತೆಯ ಹಿನ್ನೆಲೆ ಎಂದರೆ ಗುಣಮಟ್ಟದ ಶಿಕ್ಷಣವನ್ನು ನಿರಂತರತೆ ಕಾಯ್ದುಕೊಂಡಿರುವುದು. ಶಿಕ್ಷಕರುಗಳ ಸೇವಾಮನೋಭಾವ, ಶಾಲಾಭಿವೃದ್ದಿ ಸಮಿತಿಯ ಆಸಕ್ತಿ.
ಕಳೆದ ಶೈಕ್ಷಣಿಕ ಸಾಲಿನಲ್ಲಿ 469 ವಿದ್ಯಾರ್ಥಿಗಳು ಇದ್ದರು. ಈ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ 493 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಅದು 500ಕ್ಕೆ ತಲುಪುವ ನಿರೀಕ್ಷೆಯನ್ನು ಶಾಲೆ ಹೊಂದಿದೆ. 1 ರಿಂದ 7ನೇ ತರಗತಿಯ ತನಕ ಇರುವ ಈ ಶಾಲೆಯಲ್ಲಿ ಪ್ರತೀ ತರಗತಿಯಲ್ಲಿ ಮಕ್ಕಳು ತುಂಬಿ ತುಳುಕುತ್ತಿದ್ದಾರೆ. 1ರಿಂದ 3ನೇ ತರಗತಿಯ ಒಳಗೆ ೨೦೦ಮಕ್ಕಳು ಇದ್ದಾರೆ. ಈ ಶಾಲೆಯ ಅವರಣದ ಒಳಗೆ ಬಂದರೆ ಕ್ರೀಡಾಂಗಣ ಸದಾ ಬ್ಯುಸಿಯಾಗಿರುತ್ತದೆ. ಕಲಿಕೆಯಲ್ಲಿ ಮಕ್ಕಳು ಹೇಗೆ ಸಾಧನೆ ಮಾಡುತ್ತಾರೋ ಹಾಗೆಯೇ ಕ್ರೀಡೆಯಲ್ಲಿಯೂ ಕೂಡಾ ಇಲ್ಲಿನ ಮಕ್ಕಳು ರಾಷ್ಟ್ರ ಮಟ್ಟದ ತನಕ ಸಾಧನೆ ಮಾಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆ, ಚಿತ್ರಕಲೆ, ಇತ್ಯಾದಿಗಳಲ್ಲಿಯೂ ಕುವೆಂಪು ಶಾಲೆಯ ವಿದ್ಯಾರ್ಥಿಗಳು ಸದಾ ಮುಂದೆಯೇ. ಪ್ರತಿಭಾಕಾರಂಜಿಯಂತಹ ಕಾರ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಸಾಲು ಸಾಲು ಬಹುಮಾನಗಳು ಈ ಶಾಲೆಗೆ ನಿಶ್ಚಿತ. ಅಂತಹ ವ್ವವಸ್ಥಿತ ಕಲಿಕಾ ವಿಧಾನ ಇಲ್ಲಿರುವುದರಿಂದ ಪೋಷಕರು ಸಹಜವಾಗಿಯೇ ತಮ್ಮ ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಿದ್ದಾರೆ. ಮಕ್ಕಳು ಸರ್ವಾಂಗೀಣ ವಿಕಾಸ ಹೊಂದಬೇಕು. ಕೇವಲ ಶಿಕ್ಷಣ ಮಾತ್ರವಲ್ಲ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಕೂಡಾ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದು ಪೋಷಕರ ಆಶಯವಾಗಿದೆ.
ಈ ಶಾಲೆಯಲ್ಲಿ ಇಷ್ಟೊಂದು ಮಕ್ಕಳು ಇದ್ದರೂ ಕೂಡಾ ಪ್ರತೀ ಮಗುವು ಕೂಡಾ ಕಲಿಕೆಯಲ್ಲಿ ಹಿಂದೆ ಬೀಳಬಾರದು. ೭ನೇ ತರಗತಿಯಿಂದ ತೇರ್ಗಡೆಯಾಗಿ ಹೋಗುವಾಗ ಯಾವುದೇ ವಿಷಯದಲ್ಲಿಯೂ ಕೂಡಾ ಹಿಂದುಳಿಯಬಾರದು. ಆಂಗ್ಲ ಭಾಷೆಯಲ್ಲಿ ಪ್ರಬುದ್ದತೆ ಸಾಧಿಸಬೇಕು ಎನ್ನುವ ನಿಲುವು ಇಲ್ಲಿನ ಅಧ್ಯಾಪಕ ವೃಂದ ಹಾಗೂ ಶಾಲಾಭಿವೃದ್ದಿ ಸಮಿತಿಯದ್ದು.
2017-18 ನೇ ಶೈಕ್ಷಣಿಕ ವರ್ಷದ ಜೂನ್ನಿಂದ 1ನೇ ತರಗತಿಗೆ ಇಂಗ್ಲೀಷ್ ಮಾಧ್ಯಮದ ವಿಭಾಗ ಆರಂಭವಾಗಿದೆ. ಕಳೆದ 5 ವರ್ಷದಿಂದ 6 ಮತ್ತು 7ನೇ ತರಗತಿಯಲ್ಲಿ ಗುಣಮಟ್ಟದ ಇಂಗ್ಲೀಷ್ ಮಾಧ್ಯಮ ವಿಭಾಗಗಳು, ಕುಂದಾಪುರ ತಾಲೂಕಿನಲ್ಲಿಯೇ ಸರ್ಕಾರಿ ಶಾಲೆಗಳ ಪೈಕಿ ಅತ್ಯಧಿಕ ಮಕ್ಕಳನ್ನು ಹೊಂದಿರುವ ಹೊಂದಿರುವ ಈ ಶಾಲೆ, ಜಿಲ್ಲೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಕುಂದಾಪುರ ತಾಲೂಕಿನಲ್ಲಿಯೇ ಅತ್ಯಂತ ಹೆಚ್ಚು ನಲಿ-ಕಲಿ ವಿದ್ಯಾರ್ಥಿಗಳ ಹೊಂದಿರುವ ಖ್ಯಾತಿ ಈ ಶಾಲೆಗಿದೆ.
1993 ರಲ್ಲಿಯೇ ಶತಮಾನೋತ್ಸವ ಆಚರಿಸಿಕೊಂಡಿರುವ ಈ ಶಾಲೆ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದೆ. ಗುಣಮಟ್ಟದ ಕಲಿಕೆಗಾಗಿ ಬೋಧನಾ ಕಲಿಕಾ ಸಾಮಾಗ್ರಿಗಳ ಬಳಕೆ, ಸಂತಷದಾಯಕ ಕಲಿಕಾ ವಾತಾವರಣ, ಸಹಪಠ್ಯ ಚಟುವಟಿಕೆಗಳಾದ ಸ್ಕೌಟ್ಸ್, ಗೈಡ್ಸ್, ಕಬ್ಸ್, ಬುಲ್ ಬುಲ್, ಸೇವಾದಳ, ಯೋಗ ಶಿಕ್ಷಣ ತರಬೇತಿ, ಪ್ರತೀ ತರಗತಿಯಲ್ಲಿಯೂ ರೀಡಿಂಗ್ ಕಾರ್ನರ್, ಸ್ಮಾರ್ಟ್ಕ್ಲಾಸ್ ಮೂಲಕ ಕಲಿತ ಪಾಠಗಳ ಸ್ಥಿರೀಕರಣ, ಇಂಗ್ಲೀಷ್, ಗಣಿತ, ವಿಜ್ಞಾನ ವಿಷಯಗಳ ಬಗ್ಗೆ ವಿಶೇಷ ಪಾಠಗಳು, ಮದ್ಯಾಹ್ನ ಬಿಡುವಿನ ವೇಳೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ದೂರದರ್ಶನ ವೀಕ್ಷಣೆಗೆ 29 ಇಂಚಿನ ಕೇಬಲ್ ಅಳವಡಿಸಿದ ಟಿ.ವಿ. ಹೀಗೆ ಹಲವಾರು ವಿಶೇಷತೆಗಳು ಈ ಶಾಲೆಯಲ್ಲಿ ಇವೆ. ಕಳೆದ ಹತ್ತು ವರ್ಷಗಳಿಂದ ಮಕ್ಕಳ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಿಕೊಂಡ ಹೆಗ್ಗಳಿಕೆ ಇರುವ ಈ ಶಾಲೆಯಲ್ಲಿ ಯಾವುದೇ ಶುಲ್ಕವಿಲ್ಲ. ಡೊನೇಶನ್ ಇಲ್ಲ.
ಪ್ರಸ್ತುತ ಶಾಲಾ ಮುಖ್ಯೋಪಾಧ್ಯಾಯರಾಗಿ ಲಲಿತಾ, ಸಹಶಿಕ್ಷಕರಾಗಿ ಶರ್ಮಿಳಾ ಜಿ., ವೇಣುಗೋಪಾಲ ಹೆಗ್ಡೆ, ದೈಹಿಕ ಶಿಕ್ಷಣ ಶಿಕ್ಷಕರಾಗಿ ಎಮ್.ಸದಾರಾಮ ಶೆಟ್ಟಿ, ಸಹಶಿಕ್ಷಕರಾಗಿ ವಿದ್ಯಾವತಿ, ಶೋಭಾ ಹೆಗಡೆ, ಕಲ್ಪನಾ ಎಮ್, ನೀಲಾವರ ಸುರೇಂದ್ರ ಅಡಿಗ, ಎಮ್.ಆರ್.ವೈಶಾಲಿ, ಪಾರ್ವತಿ, ದೇವಿ ಕೆ., ಶುಭಲಕ್ಷ್ಮೀ, ಎ.ಸೀತಾಲಕ್ಷ್ಮೀ, ಶಾಂತಲ ದೇವಿ, ಗೌರವ ಶಿಕ್ಷಕರಾಗಿ ಸಂಗೀತಾ, ಸದಾನಂದ, ಮಮತಾ, ಪ್ರತಿಮಾ ಸೇವೆ ಸಲ್ಲಿಸುತ್ತಿದ್ದಾರೆ. ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾಗಿ ಸಂಜೀವ ದೇವಾಡಿಗ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಐವರು ಬಿಸಿಯೂಟ ನೌಕರರು ಇದ್ದಾರೆ.
’ಉತ್ತಮ ಶಾಲಾ ರಾಜ್ಯ ಪ್ರಶಸ್ತಿ’ ಪಡೆದ ಏಕೈಕ ಶಾಲೆ
ಉತ್ತಮ ಶಾಲಾ ರಾಜ್ಯ ಪ್ರಶಸ್ತಿ’ ಪಡೆದ ಕರ್ನಾಟಕ ರಾಜ್ಯದಲ್ಲಿಯೇ ಏಕೈಕ ಶಾಲೆಯೆಂಬ ಹಿರಿಮೆ ಈ ಶಾಲೆಗಿದೆ. ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಅಂಗೀಕರಣ ಸಂಸ್ಥೆ(ಕೆ.ಎಸ್.ಕ್ಯು.ಎ.ಎ.ಸಿ)ಯಿಂದ ಗುಣಮಟ್ಟದ ಶಿಕ್ಷಣಕ್ಕಾಗಿ ’ಎ’ಗ್ರೇಡ್ನ್ನು ಈ ಶಾಲೆ ಪಡೆದಿದೆ.ಕುವೆಂಪು ಶಾಲೆಯ ವಿಶೇಷತೆ
ಪರಿಣಾಮಕಾರಿಯಾದ ಆಂಗ್ಲಭಾಷೆಯ ಬೋಧನೆ, ಸುಸಜ್ಜಿತ ಕಂಪ್ಯೂಟರ್ ಭವನ, ಪ್ರತೀ ಎರಡು ವಿದ್ಯಾರ್ಥಿಗಳಿಗೊಂದು ಕಂಪ್ಯೂಟರ್ ಕಲಿಸಲು ನುರಿತ ಕಂಪ್ಯೂಟರ್ ಶಿಕ್ಷಕಿ, ಚಿಣ್ಣರಿಗಾಗಿ ಚಿಲ್ಡ್ರನ್ ಪಾರ್ಕ್, ಸುಸಜ್ಜಿತ ಪ್ರತ್ಯೇಕ ಪ್ರಯೋಗಾಲಯ, ಬೋಧನಾ ಕಲಿಕೋಪಕರಣಗಳ ಬಳಕೆ, ವಿಶಾಲವಾದ ಗ್ರಂಥಾಲಯ, ೫೦೦೦ಕ್ಕಿಂತಲೂ ಹೆಚ್ಚು ಪುಸ್ತಕಗಳು. ೧ರಿಂದ ೪ನೇ ತರಗತಿ ವರೆಗೆ ಸ್ಪೋಕನ್ ಇಂಗ್ಲೀಷ್ಗಾಗಿಯೇ ಓರ್ವ ಇಂಗ್ಲೀಷ್ ಶಿಕ್ಷಕಿ, ಪ್ರತೀ ತರಗತಿಗೂ ರೇಡಿಯೋ ಬ್ರಾಡ್ಕಾಸ್ಟಿಂಗ್ ವ್ಯವಸ್ಥೆ, ಹೆಚ್ಚಿನ ಕಲಿಕೆಗಾಗಿ ಎಲ್.ಸಿ.ಡಿ ಪ್ರಾಜೆಕ್ಟರ್ ಬಳಕೆ, ತಂತ್ರಜ್ಞಾನ ಆಧಾರಿತ ಕಲಿಕಾ ವ್ಯವಸ್ಥೆ, ಎಜುಸ್ಯಾಟ್ ಬಳಕೆ, ವಿಶಿಷ್ಟ ಮಾದರಿ ಶೌಚಾಲಯ, ಎಲ್ಲಾ ತರಗತಿಗೂ ಗ್ರೀನ್ ಸಿರಾಮಿಕ್ ಬೋರ್ಡ್ಗಳು, ಶುದ್ಧೀಕರಿಸಿದ ಎಕ್ವಾಗಾರ್ಡ್ ನೀರಿನ ವ್ಯವಸ್ಥೆ, ಚಿತ್ರಕಲೆಗೆ ವಿಶೇಷ ಗಮನ, ಚಿತ್ರಕಲೆಗಾಗಿಯೇ ಓರ್ವ ನುರಿತ ಚಿತ್ರಕಲಾ ಶಿಕ್ಷಕ, ಸರಕಾರದ ಯೋಜನೆಗಳಾದ ಉಚಿತ ಶೂ, ಸಾಕ್ಸ್, ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ, ಕ್ಷೀರ ಭಾಗ್ಯಗಳ ಸಮರ್ಪಕ ಅನುಷ್ಠಾನ, ಕ್ರಿಯಾಶೀಲ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ, ಪ್ರತೀ ದಿನ ಶಾಲೆ ಆರಂಭಕ್ಕೆ ಮುನ್ನ ವಿಶೇಷ ತರಗತಿ, ಮಕ್ಕಳ ಸಾಹಿತ್ಯಾಸಕ್ತಿ ಹೆಚ್ಚಿಸಲು ತ್ರೈಮಾಸಿಕ ಹಸ್ತ ಪತ್ರಿಕೆ.ಪೋಷಕರ ದಿನಾಚರಣೆ ಈ ಶಾಲೆ ವೈಶಿಷ್ಟ್ಯ
ಮಕ್ಕಳು ಮತ್ತು ಪೋಷಕರ ಜೊತೆ ನಿಕಟ ಬಾಂದವ್ಯ ಇರಿಸಿಕೊಳ್ಳಲಾಗುತ್ತಿದೆ. ಪೋಷಕರ ದಿನಾಚರಣೆ ಎನ್ನುವ ವಿಶಿಷ್ಠ ಕಾರ್ಯಕ್ರಮವನ್ನು ಆಚರಿಸಿ, ಮಕ್ಕಳ ಪೋಷಕರಿಗೂ ಕೂಡಾ ವಿವಿಧ ಕಾರ್ಯಕ್ರಮ, ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜಿಸುವ ಹೊಸ ಪರಿಪಾಠವನ್ನು ಆರಂಭಿಸಿದೆ. ಆ ಮೂಲಕ ಶಾಲೆ ಮತ್ತು ಮಕ್ಕಳ ಪೋಷಕರ ಬಾಂಧವ್ಯ ಇನ್ನೂ ವೃದ್ದಿಯಾಗಿದೆ. ಶಾಲೆಯ ಬಗೆಗಿನ ಅಭಿಮಾನ ವೃದ್ದಿಯಾಗುವುದನ್ನು ಕಾಣಬಹುದಾಗಿದೆ.