ಮೈಸೂರು, ಜೂ 06: ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡ, ಜೆಡಿಎಸ್ ಶೀಘ್ರದಲ್ಲಿಯೇ ಕಾಂಗ್ರೆಸ್ ಪಕ್ಷವನ್ನು ನೆಲಸಮ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಇಬ್ಬರೂ ಕೂಡಾ ಹೊಂದಾಣಿಕೆ ಮೂಲಕ ರಾಜ್ಯವನ್ನು ಆಳಲು ಹೊರಟಿದ್ದಾರೆ. ಆದರೆ ಜೆಡಿಎಸ್ ನ ಸಂಚು ಬೇರೆ ಇದೆ. ಜತೆಯಲ್ಲಿದ್ದುಕೊಂಡಂತೆ ನಾಟಕವಾಡಿ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಅಪ್ಪ ಮಕ್ಕಳು ಸಂಚು ರೂಪಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಬಗ್ಗೆ ಮತ್ತೆ ಮೃದು ಧೋರಣೆ ತೋರಿಸಿರುವ ಹಿಂದೆ ಷಡ್ಯಂತ್ರ ಅಡಗಿದ್ದು, ಅಪ್ಪ ಮಕ್ಕಳ ಸಂಚಿಗೆ ಕಾಂಗ್ರೆಸ್ ಬಲಿಯಾಗಲಿದೆ ಎಂದು ಹೆಸರು ಹೇಳದೆಯೇ ಎಚ್.ಡಿ. ದೇವೇಗೌಡ ಮತ್ತು ಸಿಎಂ ಎಚ್.ಡಿ. ಕುಮಾರಸ್ವಾಮಿಯವರನ್ನು ಬಿಎಸ್ವೈ ಟೀಕಿಸಿದರು.
ಇನ್ನು ಕುಮಾರಸ್ವಾಮಿ ಬಜೆಟ್ ಮಂಡಿಸುವುದನ್ನು ಕಾದು ನೋಡೋಣ ಎಂದ ಅವರು ಜಯನಗರ ಕ್ಷೇತ್ರ ಹಾಗೂ ವಿಧಾನಪರಿಷತ್ನಲ್ಲೂ ಮೈತ್ರಿ ರಾಜಕೀಯ ಮಾಡುತ್ತಿದ್ದಾರೆ. ಅವರೇನಾದರೂ ಮಾಡಿದರೂ ನಮ್ಮ ಪ್ರಯತ್ನ ಮಾತ್ರ ನಿಲ್ಲುವುದಿಲ್ಲ ಗೆಲುವು ನಮ್ಮದು ಎಂದು ಹೇಳಿದರು .