ತುಮಕೂರು, ಜೂ 5: ಬಹುಭಾಷಾ ನಟ ಪ್ರಕಾಶ್ ರೈ ಅವರ ವಿರುದ್ದ ನಟ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದ್ದಾರೆ. ಪ್ರಚಾರಕ್ಕಾಗಿ ಬೇಕಾಬಿಟ್ಟಿಯಾಗಿ, ಸಂದರ್ಭಕ್ಕೆ ತಕ್ಕಂತೆ ಮಾತನಾಡುವ ಪ್ರಕಾಶ್ ರೈ ಬಾಯಿ ಬಚ್ಚಲು ಎಂದು ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ, ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಪ್ಪ ಅವರ ಪರ ಪ್ರಚಾರ ನಿರತರಾಗಿದ್ದ ವೇಳೆ ಚಂದ್ರು ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ನಾಡು ನುಡಿಯ ವಿಚಾರದಲ್ಲಿ ನಾನು ಕಠಿಣ ಹೃದಯಿಯಾಗಿದ್ದು, ನಮ್ಮ ನಾಡು ನುಡಿಯ ಬಗ್ಗೆ ಗೌರವ ಇಲ್ಲದವರು, ನನ್ನ ಆತ್ಮೀಯರಾದರೂ ಅವರ ವಿರುದ್ಧ ಧ್ವನಿ ಎತ್ತುತ್ತೇನೆ ಎಂದು ಹೇಳಿದರು . ಇದೇ ವೇಳೆ ರಜನಿಕಾಂತ್ ಅವರ ಕಾಲ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು ರಾಜ್ಯದ ಹಿತ ಮುಖ್ಯವಾದರೆ ವಿತರಕರು ಈ ಸಿನಿಮಾ ತೆಗೆದುಕೊಳ್ಳಬಾರದು. ಒಂದು ವೇಳೆ ಚಿತ್ರ ತೆಗದುಕೊಂಡರೆ ಮುಂದೆ ಅನಾಹುತಕ್ಕೆ ಕಾರಣವಾಗಬಹುದು. ನಾವು ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು.