ಬೆಂಗಳೂರು, ಜೂ: ಎಷ್ಟೇ ಒತ್ತಡ ಹಾಕಿದರೂ, ’ಪವರ್ ಫುಲ್’ ಮಂತ್ರಿಯಾಗಿ ಸಂಪುಟ ಸೇರುವ ನಿರೀಕ್ಷೆ ಹುಸಿಯಾದ್ದರಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಜರಾಯಿ ಖಾತೆ ಕೊಟ್ಟರೆ ದೇವಾಲಯ ಸುತ್ಕೊಂಡು ಆರಾಮಾಗಿರುತ್ತೇನೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಧನ ಖಾತೆಯನ್ನು ಕಾಂಗ್ರೆಸ್ ಉಳಿಸಿಕೊಳ್ಳಬಹುದಿತ್ತು ಎಂದು ಪಕ್ಷದ ನಾಯಕರ ವಿರುದ್ದ ಬೆಂಗಳೂರಿನಲ್ಲಿ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಮೈತ್ರಿ ಸರ್ಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಿಕೆಶಿ ಪ್ರಮುಖ ಖಾತೆಯನ್ನು ಅಪೇಕ್ಷಿಸಿದ್ದರು. ಇಂಧನ ಖಾತೆಯಲ್ಲಿ ಮುಂದುವರಿಯುವ ಇಚ್ಚೆಯೂ ಅವರದಾಗಿತ್ತು . ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ಬಯಸಿದ್ದರು. ಆದರೆ ಇಂಧನ ಇಲಾಖೆ ಜೆಡಿಎಸ್ ಪಾಲಾಗಿದ್ದು ಕೆಪಿಸಿಸಿ ಸಾರಥ್ಯದ ಕಾತರಿ ಇಲ್ಲ ಇದರಿಂದ ಅಸಮಾಧಾನಗೊಂಡಿರುವ ಅವರು ಮುಜರಾಯಿ ಖಾತೆ ಸಾಕು ದೇವಸ್ಥಾನಗಳನ್ನು ಸುತ್ಕೊಂಡು ಆರಾಮವಾಗಿ ಇರುತ್ತೇನೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರಂತೆ.
ಇಂಧನ ಖಾತೆ ಬಿಟ್ಟುಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ತನ್ನ ಸಹೋದರನಿಗೆ ಹೇಳಬಹುದಿತ್ತು. ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಆದರೆ ಮಿತ್ರ ಪಕ್ಷಕ್ಕೆ ಕಾಂಗ್ರೆಸ್ ಇಷ್ಟೋಂದು ಬೆಂಡಾಗುವ, ಶರಣಾಗುವ ಅಗತ್ಯವಿರಲಿಲ್ಲ ಎಂದು ಅಪ್ತರ ಬಳಿ ಹೇಳಿ ತಮ್ಮ ನೋವು ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.