ಕಾಸರಗೋಡು, ನ 17. (DaijiworldNews/HR): ಸ್ನೇಹಿತರ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಹೊಳೆ ಪಾಲಾಗಿದ್ದ ವಿದ್ಯಾರ್ಥಿಯ ಮೃತದೇಹ ಇಂದು ಬೆಳಿಗ್ಗೆ ಪತ್ತೆಯಾಗಿದೆ.
ಚೆಮ್ನಾಡ್ ಕೊಂಬನಡ್ಕದ ಮಿಸ್ಭಾಹ್ (15) ಮೃತಪಟ್ಟ ಬಾಲಕ.
ಸೋಮವಾರ ಮಧ್ಯಾಹ್ನ ಚಂದ್ರಗಿರಿ ಹೊಳೆಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮೂವರು ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದು, ಸ್ಥಳೀಯರು, ಅಗ್ನಿಶಾಮಕ ದಳದ ಸಿಬಂದಿಗಳು ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಬಳಿಕ ಇಂದು ಬೆಳಿಗ್ಗೆ ಸ್ಥಳೀಯರು ಮತ್ತೆ ಶೋಧ ನಡೆಸಿದ್ದು, ಬಾಲಕ ಮುಳುಗಿದ ಸ್ಥಳದಲ್ಲೇ ಮೃತದೇಹ ಪತ್ತೆಯಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಮಿಸ್ಭಾಹ್ ಚೆಮ್ನಾಡ್ ಜಮಾ ಅತ್ ಹಯರ್ ಸೆಕಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದನು.