ಕೊಝಿಕ್ಕೋಡ್, ಜೂ 04: ಫಾರಂ ಕೋಳಿಗಳಿಂದ ನಿಫಾ ವೈರಸ್ ಹರಡುತ್ತದೆ ಎಂದು ಸಾಮಾಜಿಕ ತಾಣ ಹಾಗೂ ವಾಟ್ಸ್ ಆಪ್ಗಳಲ್ಲಿ ಸುಳ್ಳು ಸಂದೇಶ ರವಾನೆ ಮಾಡುತ್ತಿದ್ದ ಏಳು ಜನರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೋಳಿ ಮಾಂಸದಲ್ಲಿ ನಿಫಾ ಹರಡುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕುರಿತಂತೆ ಮೂರು ಪ್ರತ್ಯೇಕ ಪ್ರಕರಣ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದು ಸುಳ್ಳು ಸಂದೇಶಗಳನ್ನು ವೈರಲ್ ಮಾಡುತ್ತಿದ್ದ ವೈಷ್ಣವ್, ನಿಮೇಶ್, ಬಿವಿಜ್, ದಿಲ್ಜಿತ್, ವಿಷ್ಣುದಾಸ್ ಎಂಬುವರನ್ನು ಬಂಧಿಸಲಾಗಿದೆ. ಅಲ್ಲದೇ ಇದರ ಕುರಿತು ಧ್ವನಿ ಸಂದೇಶ ರಚಿಸಿ ರವಾನೆ ಮಾಡಿದ ಕಿಡಿಗೇಡಿಗಳಿಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.
ನಿಫಾ ವೈರಸ್ ಕೋಳಿ ಮಾಂಸದಲ್ಲಿ ಪತ್ತೆಯಾದ ಕುರಿತು ಆರೋಗ್ಯ ಇಲಾಖೆಯ ಹೆಸರಿನಲ್ಲೂ ಸುಳ್ಳು ಸುದ್ದಿಯನ್ನೂ ಹಬ್ಬಿಸಲಾಗಿತ್ತು. ಈ ಕುರಿತಂತೆಯೂ ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಕೊಝಿಕ್ಕೋಡು ಪೊಲೀಸ್ ಠಾಣಾಧಿಕಾರಿ ಫರೂಕ್ ಸುಳ್ಳು ಸುದ್ದಿಯನ್ನು ಹರಡುತ್ತಿದ್ದ ಐವರನ್ನು ಈಗಾಗಲೇ ಬಂಧಿಸಿದ್ದೇವೆ. ಅಲ್ಲದೇ ನಲ್ಲಾಲಂನಲ್ಲೂ ಇಬ್ಬರ ಬಂಧನವಾಗಿದೆ. ಫಿರೋಕ್ ಆಸ್ಪತ್ರೆಯ ಕಿರಿಯ ವೈದ್ಯಾಧಿಕಾರಿಗಳು ಕೂಡಾ ಇದಕ್ಕೆ ಸಂಬಂಧಪಟ್ಟಂತೆ ದೂರನ್ನೂ ಕೂಡಾ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.