Karavali
ಧರ್ಮಸ್ಥಳ: ಪಾಪನಾಶಿನಿ ನೇತ್ರಾವತಿ ಒಡಲಿತ್ತು ಕಸಗಳ ರಾಶಿ..!
- Mon, Jun 04 2018 11:20:22 AM
-
ಬೆಳ್ತಂಗಡಿ, ಜೂ 04: ಹುಡುಕಿದಷ್ಟು ಸಿಗುವ ತೆಂಗಿನ ಕಾಯಿ, ಸ್ನಾನ ಮಾಡಿ ಬಿಸಾಡಿದ ಬಟ್ಟೆಗಳು, ದೇವರ ಫೋಟೊಗಳು, ಸಾಬೂನು, ಕನ್ನಡಿ, ಬಾಚಣಿಕೆ, ಟೂತ್ ಬ್ರಶ್, ಚಪ್ಪಲಿಗಳು, ಮಕ್ಕಳ ಆಟಿಕೆಗಳು, ಹೀಗೆ ನದಿ ನೀರಿನಲ್ಲಿ ಸಿಕ್ಕ ವಸ್ತುಗಳು ಸುಮಾರು 13 ಕ್ಕೂ ಹೆಚ್ಚು ಲೋಡುಗಳಷ್ಟು ಕಸ .. ಇಷ್ಟೇಲ್ಲಾ ಕಸ ದೊರಕಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯಲ್ಲಿ...
ಅಸಂಖ್ಯಾತ ರೈತರ ಆಶಾಕಿರಣ. ಸಹಸ್ರಾರು ಭಕ್ತರ ಪಾಲಿಗೆ ಪಾಪನಾಶಿನಿ. ಬೆಂಗಳೂರಿನ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆ ವರೆಗೆ ರಾಜ್ಯದೆಲ್ಲೆಡೆಯಿಂದ ಬಂದ 500ಕ್ಕೂ ಮಿಕ್ಕಿ ಕಾರ್ಯಕರ್ತರು ನದಿಯ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಸ್ವತಃ ಚಕ್ರವರ್ತಿ ಸೂಲಿಬೆಲೆ ನದಿ ನೀರಿಗೆ ಇಳಿದು ಸ್ವಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕರ್ತರನ್ನು ಹುರಿದುಂಬಿಸಿದರು.
ಸ್ನಾನ ಮಾಡುವ ನೆಪದಲ್ಲಿ, ವಿಭಿನ್ನ ಆಚರಣೆಗಳ ಹಿನ್ನೆಲೆಯಲ್ಲಿ ಮೂಢ ನಂಬಿಕೆಯಿಂದ ನಾವೆಲ್ಲ ನೇತ್ರಾವತಿ ನದಿಯನ್ನು ಕಲುಷಿತಗೊಳಿಸಿದ್ದೇವೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ ಹಾಗೂ ಅನುಮತಿಯೊಂದಿಗೆ ನಾವು ಇಂದು ನೇತ್ರಾವತಿ ನದಿ ಸ್ವಚ್ಛತಾ ಕಾರ್ಯ ಮಾಡಿದ್ದೇವೆ. ದಯ ಮಾಡಿ ನದಿಯನ್ನು ಎಂದಿಗೂ ಕಲುಷಿತಗೊಳಿಸಬೇಡಿ, ಕೊಳಕು ಮಾಡಬೇಡಿ ಎಂದು ಯುವಾ ಬ್ರಿಗೇಡ್ ಕಾರ್ಯಕರ್ತರು ಭಕ್ತರಿಗೆ ಕರೆ ನೀಡಿದ್ದಾರೆ.ಹೊಸಪೇಟೆಯ ಖಾಸಗಿ ಕಂಪೆನಿ ಉದ್ಯೋಗಿ ಚಂದ್ರಶೇಖರ ಹೇಳುವಂತೆ ಇಂತಹ ಸೇವಾಕಾರ್ಯ ನಮಗೆ ಸಂತಸ ತಂದಿದೆ. ಪರಿಸರ ಸಂರಕ್ಷಣೆಯೊಂದಿಗೆ ಜಲ ಸಂರಕ್ಷಣೆಯೂ ನಮ್ಮೆಲ್ಲರ ಹೊಣೆಯಾಗಿದೆ. ಇಂತಹ ಕೆಲಸದಿಂದ ಮುಂದಿನ ಪೀಳಿಗೆಗೂ ನಾವು ಮಾರ್ಗದರ್ಶನ, ಪ್ರೇರಣೆ ನೀಡಿದಂತಾಗುತ್ತದೆ.
ಶಿವಮೊಗ್ಗಾದ ಕಾಲೇಜು ವಿದ್ಯಾರ್ಥಿನಿ ಅಂಕಿತಾ, ಸಮಾಜ ಸೇವಕಿ ಭಾಗೀರತಿ ಮತ್ತು ಸ್ನೇಹಾ ಹೇಳುವಂತೆ ಇಂತಹ ಸೇವಾ ಕಾರ್ಯಗಳು ನಮಗೆ ಹೆಚ್ಚಿನ ಉತ್ಸಾಹ ನೀಡುತ್ತವೆ. ಜಾತಿ-ಮತ ಬೇಧವಿಲ್ಲದೆ ಪರಸ್ಪರ ಪ್ರೀತಿ-ವಿಶ್ವಾಸದಿಂದ ಭಾಗವಹಿಸುವುದರಿಂದ ಸಮಾಜದ ಸಂಘಟನೆಯೊಂದಿಗೆ ಕೋಮು ಸಾಮರಸ್ಯ ಉಂಟಾಗುತ್ತದೆ.
ಯುವಾ ಬ್ರಿಗೇಡ್ ಕಾರ್ಯಕರ್ತ ಮಂಗಳೂರಿನ ಶರತ್ ಹೇಳುವಂತೆ ಭಕ್ತರು ಮೂಢನಂಬಿಕೆಯಿಂದ ಬಟ್ಟೆ, ತೆಂಗಿನ ಕಾಯಿ, ದೇವರ ಫೋಟೋಗಳನ್ನು ನದಿಗೆ ಎಸೆಯುತ್ತರೆ. ಅರ್ಚಕರು ಹಾಗೂ ಜೋತಿಷಿಗಳು ಸಕಾಲಿಕ ಮಾಹಿತಿ, ಮಾರ್ಗದರ್ಶನದಿಂದ ಇದನ್ನು ತಡೆಗಟ್ಟಬಹುದು.
ಯುವಾ ಬ್ರಿಗೇಡ್ ರಾಜ್ಯ ಸಂಚಾಲಕರಾದ ಬೆಂಗಳೂರಿನ ಚಂದ್ರಶೇಖರ್, ರಾಜ್ಯದ ಅನೇಕ ಕಡೆಗಳಲ್ಲಿ ನದಿಗಳು ಹಾಗೂ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರಿಂದಾಗಿ ಗದಗದಲ್ಲಿ ಬತ್ತಿ ಹೋದ ಕೆರೆಯಲ್ಲಿ ಈಗ ನೀರಿನ ಮಟ್ಟ ಏರಿಕೆಯಾಗಿದೆ ಎಂದು ಹೇಳಿದರು. ರಾಜ್ಯದೆಲ್ಲೆಡೆ ಯುವಾ ಬ್ರಿಗೇಡ್ನ ಮೂರು ಸಾವಿರ ಕಾರ್ಯಕರ್ತರು ನದಿಗಳ ಸ್ವಚ್ಛತಾ ಅಭಿಯಾನದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.
ಸರ್ಕಾರ ಕಡ್ಡಾಯ ಆದೇಶ ನೀಡಬೇಕು
ಸ್ನಾನ ಮಾಡಿ ನದಿ ನೀರಿನಲ್ಲೆ ಬಟ್ಟೆ ಒಗೆಯುವುದರಿಂದ, ತ್ಯಾಜ್ಯಗಳನ್ನು ಹಾಕುವುದರಿಂದ ಪಾವಿತ್ರ್ಯಕ್ಕೆ ಧಕ್ಕೆಯಾಗುವುದಲ್ಲದೆ ಅನಾರೋಗ್ಯಕರ ಪರಿಸರ ನಿರ್ಮಾಣವಾಗುತ್ತದೆ. ತೀರ್ಥಕ್ಷೇತ್ರದಲ್ಲಿರುವ ನದಿಗಳಲ್ಲಿ ಬಟ್ಟೆ ಒಗೆಯದಂತೆ ಸರ್ಕಾರವೆ ಕಡ್ಡಾಯ ಕಾನೂನು ಜಾರಿ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.
ಯುವಾ ಬ್ರಿಗೇಡ್ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದ ಅವರು ಭಕ್ತರು ಕೂಡಾ ಮೂಢನಂಬಿಕೆಗೆ ಒಳಗಾಗದೆ ಎಚ್ಚರಿಕೆ ಮತ್ತು ಹೊಣೆಗಾರಿಕೆಯಿಂದ ನದಿಯ ಪಾವಿತ್ರ್ಯ ಕಾಪಾಡಬೇಕು. ಇದು ರಾಷ್ಟ್ರ ವ್ಯಾಪಿ ಆಂದೋಲನವಾಗಬೇಕು ಎಂದು ಅವರು ಸಲಹೆ ನೀಡಿದರು.ಶಾಲಾ-ಕಾಲೇಜುಗಳಲ್ಲಿರುವ ಎನ್.ಸಿ.ಸಿ. ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು ಕೂಡಾ ಸ್ವಚ್ಛತೆ ಮತ್ತು ಪಾವಿತ್ರ್ಯತೆ ಕಾಪಾಡುವ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು ಎಂದು ಹೆಗ್ಗಡೆಯವರು ಕಿವಿಮಾತು ಹೇಳಿದರು.
ಧರ್ಮಸ್ಥಳ ದೇವಸ್ಥಾನದ ವತಿಯಿಂದ ಕಾರ್ಯಕರ್ತರಿಗೆಲ್ಲ ಉಚಿತ ಊಟ, ವಸತಿ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಯಿತು.
ಯುವ ಬ್ರಿಗೇಡ್ನ ಮಾರ್ಗದರ್ಶಕ ಚಕ್ರಮರ್ತಿ ಸೂಲಿಬೆಲೆಯವರು ಮಾತನಾಡಿ, ಯುವ ಬ್ರಿಗೇಡ್ ನೀರಿನ ಮೂಲದ ಕುರಿತಂತೆ, ನೀರಿನ ಕುರಿತಂತೆ ತುಂಬಾ ಕಾಳಜಿಯುಳ್ಳಂತದ್ದು. ಈ ಹಿಂದೆ 120 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸ್ವಚ್ಛತೆ ಮಾಡಿದ ನಂತರ ನದಿಯ ಕೈಂಕರ್ಯಕ್ಕೆ ಬಂದಿದ್ದೇವೆ. ಕಟೀಲಿನ ನಂದಿನಿ, ಕೊಲ್ಲೂರಿನ ಸೌಪರ್ಣಿಕ, ನಂಜನಗೂಡಿನ ಕಪಿಲ ಹಾಗೂ ಕಾವೇರಿ ನದಿಯನ್ನು ಸ್ವಚ್ಛ ಮಾಡಿದ ನಂತರ ನೇತ್ರಾವತಿ ನದಿಯನ್ನು ಸ್ವಚ್ಛ ಮಾಡಬೇಕು ಅನ್ನಿಸಿತು. ಶ್ರೀ ಕ್ಷೇತ್ರದ ವತಿಯಿಂದ ನದಿಯನ್ನು, ಸ್ನಾನಘಟ್ಟವನ್ನು ತುಂಬಾ ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ನದಿಯ ಒಳಗಡೆ ಯಾತ್ರಾರ್ಥಿಗಳು ಬಟ್ಟೆಬರೆಗಳನ್ನು, ದೇವರ ಪೋಟೋಗಳನ್ನು ಹಾಕಿ ಕೊಳಕು ಮಾಡಿದ್ದಾರೆ. ಈ ರೀತಿಯ ನದಿಯ ಶುದ್ಧತೆಯ ಕಾರ್ಯಕ್ರಮವನ್ನು ಹಿಂದೆಯೂ ಮಾಡಿದ್ದೀವಿ, ಮುಂದೆಯೂ ಮಾಡುತ್ತೇವೆ.ನಾಡಿನ ನದಿ ಮೂಲಗಳನ್ನು ಉಳಿಸಿಕೊಳ್ಳಬೇಕು. ಎಲ್ಲರೂ ಕುಡಿಯೊದ್ದಕ್ಕೆ ನೀರು ಬೇಕು, ನೀರನ್ನ ತಿರುಗಿಸಿ ನಾವು ಬೇರೆ ಕಡೆ ತೆಗೆದುಕೊಂಡು ಹೋಗ್ತೀವಿ ಎಂದು ಹೇಳಬೇಕಾದರೆ ಇರುವ ನೀರನ್ನ ಶುದ್ಧವಾಗಿ ಇರಿಸಿಕೊಳ್ಳುವ ಪ್ರಯತ್ನಕ್ಕೆ ಯುವ ಬ್ರಿಗೇಡ್ ಯಾವತ್ತು ನಿರತವಾಗಿದೆ. ಆದ್ದರಿಂದ ಇವತ್ತಿನ ಕಾರ್ಯಕ್ರಮವಾಗಿದೆ.
ಇವತ್ತು ಯು ಬ್ರಿಗೇಡ್ನ ಕಾರ್ಯಕರ್ತರ ದೃಷ್ಟಿಯಿಂದ 350 ಜನ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದಿದ್ದಾರೆ. ಸ್ಥಳೀಯವಾಗಿ ಬೇರೆ ಬೇರೆ ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿದ್ದು ಸುಮಾರು 500 ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೂ ಸ್ವಚ್ಛತೆ ಕಾರ್ಯಕ್ರಮ ನಡೆಯುತ್ತದೆ.
ಮಳೆಗಾಲದಲ್ಲಿ ನದಿ ಸ್ವಚ್ಛತೆ ಮಾಡಲು ಆಗುವುದಿಲ್ಲ. ನದಿಯ ಜಲಾನಯನದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.