ಮಂಗಳೂರು, ಜೂ 03: ನಗರದಲ್ಲಿ ಕಳೆದ 5-6 ದಿನಗಳ ಹಿಂದೆ ಸುರಿದ ಮಳೆಗೆ ಮನೆಯಲ್ಲಿ ಸಾಕಿದ್ದ ಹಲವು ಪ್ರಾಣಿಗಳು ನಾಪತ್ತೆಯಾಗಿದ್ದು, ಹುಡುಕಿಕೊಡಿ ಎಂದು ದೂರು ದಾಖಲಾಗಿರುವ ಘಟನೆ ನಡೆದಿವೆ.
ಕಳೆದ ಮೇ 29ರಂದು ಮಂಗಳೂರಿನಲ್ಲಿ ಭಾರೀ ಮಳೆಯಾಗಿದ್ದು, ಅನೇಕ ಅವಾಂತರ ಸೃಷ್ಠಿ ಮಾಡಿತ್ತು. ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಹಾನಿಗೊಳಗಾಗಿದ್ದವು. ಇದೀಗ ಮಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ದೂರು ದಾಖಲಾಗುತ್ತಿದೆ. ಸಾಕು ಪ್ರಾಣಿಗಳ ಜೊತೆ ಭಾವನಾತ್ಮಕವಾಗಿ ಬೆಸೆದಿರುವ ದೂರುಗಳು ಶಕ್ತಿನಗರದಲ್ಲಿರುವ ಎನಿಮಲ್ ಕೇರ್ ಟ್ರಸ್ಟ್ ನಲ್ಲಿ ದಾಖಲಾಗುತ್ತಿವೆ.
ನಮ್ಮ ಮನೆಯ ನಾಯಿ, ಬೆಕ್ಕುಗಳು ನಾಪತ್ತೆಯಾಗಿವೆ. ದಯವಿಟ್ಟು ಅವನ್ನು ಹುಡುಕಿಕೊಡಿ ಎಂದು ಮನೆ ಮಾಲಿಕರು ತಮ್ಮ ಸಂಬಂಧಿಗಳು, ಸ್ನೇಹಿತರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡುತ್ತಿದ್ದಾರೆ. ಮಾತ್ರವಲ್ಲ ಮನೆಯಲ್ಲಿ ಅತಿಯಾದ ಪ್ರೀತಿಯಿಂದ ಸಾಕುತ್ತಿದ್ದ ಸಾಕು ಪ್ರಾಣಿಗಳು ಕಾಣೆಯಾಗಿರುವ ದೂರುಗಳು ಎನಿಮಲ್ ಕೇರ್ ಟ್ರಸ್ಟ್ ನಲ್ಲಿ ದಾಖಲಾಗುತ್ತಿದ್ದು, ತಮ್ಮ ಸಾಕು ಪ್ರಾಣಿಗಳನ್ನು ಹುಡುಕಿಕೊಡುವಂತೆ ಮನವಿ ಮಾಡುತ್ತಿದ್ದಾರೆ.
ನಗರದಲ್ಲಿ ಎಡೆಬಿಡದೇ ಸುರಿದ ಮಳೆಯಿಂದ ಕೃತಕ ನೆರೆಯಾಗಿತ್ತು. ಇದರಿಂದ ಮನೆಯಲ್ಲಿರುವ ಸಾಕು ಪ್ರಾಣಿಗಳು ಮಳೆಯ ಭಯದಿಂದ ಓಡಿಹೋಗಿರುವುದು, ಅಥವಾ ನೀರಿನಲ್ಲಿ ಕೊಚ್ಚಿ ಹೋಗಿರುವ ಸಾಧ್ಯತೆ ಇದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ನಾಯಿಯ ಪೋಟೋ ಜತೆಗೆ ಮಾಹಿತಿಯನ್ನು ನೀಡಿ ಸಿಕ್ಕಿದರೆ ಸಂಪರ್ಕಿಸಿ ಎಂಬ ಸಂದೇಶನವನ್ನು ರವಾನಿಸುತ್ತಿದ್ದಾರೆ. ಶಕ್ತಿ ನಗರದಲ್ಲಿರುವ ಎನಿಮಲ್ ಟ್ರಸ್ಟ್ ಕೇರ್ ಗೆ ಭಾರಿ ಮಳೆಯ ಸಂದರ್ಭದಲ್ಲಿ ನಾಪತ್ತೆಯಾದ ಸಾಕು ಪ್ರಾಣಿಗಳನ್ನು ಹುಡುಕಿಕೊಡುವಂತೆ 9 ದೂರುಗಳು ದಾಖಲಾಗಿದೆ.