ಕುಂದಾಪುರ, ಸೆ 25: ಅಂತರ್ಜಲ ಮಟ್ಟ ಕುಸಿಯುತ್ತಿರುವ ಈ ದಿನಗಳಲ್ಲಿ ಹಾಳುಬಿದ್ದಿರುವ ಕೆರೆಗಳ ಪುನಶ್ಚೇತನ ಕೆಲಸಗಳು ನಡೆಯುವುದು ತೀರಾ ಕಡಿಮೆ. ಸರ್ಕಾರ ಮಟ್ಟದಲ್ಲಿಯೂ ಕೆರೆಗಳ ಪುನಶ್ಚೇತನಕ್ಕೆ ಸಾಕಷ್ಟು ಕಾರ್ಯಕ್ರಮಗಳು ಇದ್ದರೂ ಕೂಡಾ ಅದು ಕಾರ್ಯಗತಗೊಳ್ಳುವುದು ತೀರಾ ಕಡಿಮೆ. ಆದರೆ ಸಾರ್ವಜನಿಕರು, ಉದ್ಯಮಿಗಳು ಮನಸ್ಸು ಮಾಡಿದರೆ ಅಸಾಧ್ಯವಾದದನ್ನು,ಸಾಧಿಸಬಹುದೆನ್ನುವುದನ್ನು ಕುಂದಾಪುರದ ನೇರಂಬಳ್ಳಿಯ ಜನತೆ ತೋರಿಸಿಕೊಟ್ಟಿದ್ದಾರೆ
ಪ್ರಾಚೀನ ಕೆರೆಯನ್ನು ಸಂಪೂರ್ಣ ಜೀರ್ಣೋದ್ಧಾರ
ಇದು ಸುಮಾರು 250 ವರ್ಷಕ್ಕೂ ಹಿಂದಿನ ಕೆರೆ. ನೇರಂಬಳ್ಳಿಯ ಗೋಪಾಲಕೃಷ್ಣ ದೇವಸ್ಥಾನದ ಹತ್ತಿರ ಇರುವ ಈ ಕೆರೆಯನ್ನು ಎರಡುವರೆ ಶತಮಾನಗಳ ಪೂರ್ವದಲ್ಲಿ ನಿರ್ಮಿಸಲಾಯಿತು ಎನ್ನಲಾಗಿದೆ. ಪ್ರಾಚೀನವಾದ ಐತಿಹ್ಯ ಹೊಂದಿರುವ ಈ ಕೆರೆ ಧಾರ್ಮಿಕವಾಗಿ ಸಾಕಷ್ಟು ಮಹತ್ವ ಪಡೆದ ಕೆರೆಯಾಗಿತ್ತು. ಅಲ್ಲದೇ 200 ವರ್ಷಗಳಷ್ಟು ಕಾಲ ಈ ಕೆರೆಯ ನೀರನ್ನೇ ಅವಲಂಬಿಸಿ ಪರಿಸರದಲ್ಲಿ ಬೇಸಾಯ ಮಾಡಲಾಗುತ್ತಿತ್ತು. ಅಷ್ಟರ ಮಟ್ಟಿಗೆ ಈ ಕೆರೆ ಆ ಊರಿನ ಸರ್ವಸ್ವ ಆಗಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕೆರೆ ಹೂಳು ತುಂಬಿ ನೆನೆಗುದಿಗೆ ಬಿದ್ದಿತ್ತು. ಸ್ಥಳೀಯ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾದ್ದರಿಂದ ಕೆರೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೂಡಾ ಆಸಕ್ತಿ ಇರಲಿಲ್ಲ. ಆದರೆ ಕೆರೆಯನ್ನು ಪುನಶ್ಚೇತನ ಗೊಳಿಸಬೇಕು ಎನ್ನುವುದು ಎಲ್ಲರ ಇಚ್ಚೆಯಾಗಿತ್ತು. ಆದಕ್ಕೆ ಲಕ್ಷಾಂತರ ಹಣ ಬೇಕಾದ್ದರಿಂದ ಅದು ಅಲ್ಲಿಗೆ ಸ್ಥಗಿತವಾಗಿತ್ತು.
ಕಾಯಕಲ್ಪದ ಶುಭಯೋಗ
ವಿಶೇಷವೆಂದರೆ ಈ ಕೆರೆ ಇವತ್ತು ಸುಸಜ್ಜಿತವಾಗಿ ಜೀರ್ಣೋದ್ಧಾರಗೊಂಡಿದೆ. ಅದರ ಹಿನ್ನೆಲೆ ಕೂಡಾ ಅಚ್ಚರಿಯ ಅಂಶವಾಗಿದೆ. ಸೀತಮ್ಮ ನಾರಾಯಣಪ್ಪಯ್ಯ ಅವರಿಗೆ ಕಾಶಿ ಯಾತ್ರೆಯ ಮಾಡುವ ಸಂಕಲ್ಪ ಇತ್ತು. ಸ್ವಪ್ನ ಸಂದೇಶವೂ ಆಗಿತ್ತು. ಆದರೆ ಅವರ ತಾಯಿಗೆ ಕಾಶಿಯಾತ್ರೆಗಿಂತ ಕೆರೆಯ ಪುನಶ್ಚೇತನ ಮಾಡಿದರೆ ಅದಕ್ಕಿಂತ ನೂರ್ಮಡಿ ಪುಣ್ಯ ಬರುತ್ತದೆ ಎನ್ನುವ ಭಾವನೆ ಉಂಟಾಯಿತು. ಇದನ್ನು ಅವರು ಹಂಚಿಕೊಳ್ಳುತ್ತಾರೆ. ಅಂತೆಯೇ ಹೈದರಬಾದ್ ಉದ್ಯಮಿಗಳಾದ ಎನ್.ಎನ್.ವಾದಿರಾಜ ರಾವ್ ಸುಬ್ಬುಲಕ್ಷ್ಮೀ ದಂಪತಿಗಳು ಈ ಕೆರೆಯ ಜೀರ್ಣೋದ್ಧಾರಕ್ಕೆ ಅಣಿಯಾಗುತ್ತಾರೆ. ಅತ್ಯಂತ ವ್ಯವಸ್ಥಿತವಾಗಿ ಕೆರೆಯನ್ನು ಪುನಶ್ಚೇತನಗೊಳಿಸಿ, ಲೋಕಾರ್ಪಣೆಗೊಳಿಸುವುದರೊಂದಿಗೆ ತಾಯಿಯ ಮನೋಸಂಕಲ್ಪ ಈಡೇರಿಸಬೇಕು ಎನ್ನು ನಿರ್ಧಾರಕ್ಕೆ ಬರುತ್ತಾರೆ. ಅಂತೆಯೇ ಗೋಪಾಲಕೃಷ್ಣ ದೇವಸ್ಥಾನದ ಕೆರೆಯ ಪುನಶ್ಚೇತನ ಕಾರ್ಯ ಆರಂಭವಾಗುತ್ತದೆ.
40 ಅಡಿ ಅಗಲ 40 ಅಡಿ ಆಳದ ಕೆರೆಯನ್ನು ಜೀರ್ಣೋದ್ದಾರಗೊಳಿಸಲಾಗುತ್ತದೆ. ಈ ಪುಷ್ಕರಣಿಯ ನಡುವೆ 18 ಅಡಿಯ ಬಾವಿಯನ್ನು ಕೂಡಾ ನಿರ್ಮಾಣ ಮಾಡಲಾಗುತ್ತದೆ. ಅತ್ಯಂತ ವ್ಯವಸ್ಥಿತವಾಗಿ ಸುಮಾರು 13 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಕೆರೆಯ ನಿರ್ಮಾಣ ಆಗಿದೆ. ನೋಡುಗರ ಚಿತ್ತ ಸೆಳೆಯುವಂತೆ ಕೆರೆ ಆವರಣವನ್ನು ನಿರ್ಮಾಣಗೊಳಿಸಲಾಗಿದೆ. ಸುತ್ತ ಲೋಹದ ಬೇಲಿಯನ್ನು ನಿರ್ಮಾಣ ಮಾಡಲಾಗಿದೆ. ಕೆರಯನ್ನು ವೀಕ್ಷಿಸಲು ಸಾಕಷ್ಟು ಅವಕಾಶವನ್ನು ನೀಡಿ ಸುಂದರ ಅಚ್ಚುಕಟ್ಟು ಪ್ರದೇಶವನ್ನು ನಿರ್ಮಾಣಗೊಳಿಸಲಾಗಿದೆ.
ಲೋಕಾರ್ಪಣೆ
ಪುನಶ್ಚೇತನಗೊಂಡ ಕೆರೆಯನ್ನು ರವಿವಾರ ಶುಭ ಮಹೂರ್ತದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೆರೆಯನ್ನು ಪುನಶ್ಚೇತನ ಗೊಳಿಸಿದ ದಾನಿಗಳಾದ ಹೈದರಬಾದ್ ತಿರುಪತಿ ಉದ್ಯಮಿಗಳಾದ ಎನ್.ಎನ್.ವಾದಿರಾಜ ರಾವ್, ಕೃಷಿಕರಾದ ರಾಮಚಂದ್ರ ವರ್ಣ, ಮಯೂರ ಗ್ರೂಫ್ ಬೆಂಗಳೂರು ಇದರ ಉದ್ಯಮಿ ಶ್ರೀನಿವಾಸ ರಾವ್, ಗಣೇಶ ಭಟ್, ಹಾಗೂ ಎನ್.ಎನ್.ವಾದಿರಾಜ ರಾವ್ ಕುಟುಂಬಿಕರು, ಊರವರು ಉಪಸ್ಥಿತರಿದ್ದರು.