ಸುರತ್ಕಲ್,ಜೂ.೦೨: ಇಂದು ಬೆಳ್ಳಂಬೆಳಿಗ್ಗೆ ಸುರತ್ಕಲ್ ಚೊಕ್ಕಬೆಟ್ಟು ಸಮೀಪದ ಮೋರಿ ಬಳಿ ಅಪರಿಚಿತ ವ್ಯಕ್ತಿಯ ಕೊಳೆತ ಮೃತದೇಹ ಗೋಣಿ ಚೀಲದಲ್ಲಿ ತುಂಬಿಸಿಟ್ಟ ರೀತಿಯಲ್ಲಿ ಪತ್ತೆಯಾಗಿದೆ.
ತನಿಖೆ ನಡೆಸಿದ ಪೊಲೀಸರು ಇದು ಕೊಲೆ ಶಂಕೆ ಎಂದು ಖಚಿತಪಡಿಸಿದ್ದಾರೆ. ಕೊಲೆಗೀಡಾದವರನ್ನು ಕೊಪ್ಪಳ ಜಿಲ್ಲೆಯ ಮರಿಯಪ್ಪ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ವಿಫುಲ್ ಕುಮಾರ್ ಭೇಟಿ ನೀಡಿ ಅಧಿಕಾರಿಗಳಿಗೆ ತನಿಖೆಗಾಗಿ ಮಾರ್ಗದರ್ಶನ ನೀಡಿದ್ದಾರೆ. ಕಳೆದ ಮಂಗಳವಾರ ಸುರಿದ ಭಾರೀ ಮಳೆಗೆ ಕಾಲು ಜಾರಿ ಬಿದ್ದು ಯಾರದೋ ಶವ ಇಲ್ಲಿನ ಮೋರಿಯಲ್ಲಿ ಸಿಲುಕಿಕೊಂಡಿರುವ ಸಾಧ್ಯತೆಗಳಿವೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿ ಸುರತ್ಕಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸುಮಾರು 55ರ ಹರೆಯದ ಈ ವ್ಯಕ್ತಿ ಇದೀಗ ಕೊಲೆಯಾಗಿದ್ದು, ಇವರನ್ನು ಎರಡು ತುಂಡು ಮಾಡಿ ಗೋಣಿಚೀಲದಲ್ಲಿ ತುಂಬಿಸಿಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.