ಮಂಗಳೂರು, ಜೂ 01: ಕಲ್ಲಡ್ಕದಲ್ಲಿರುವ ಶ್ರೀ ರಾಮ ಮತ್ತು ಪುಣಚ ಶ್ರೀ ದೇವಿ ಶಾಲೆಗಳಿಗೆ ರಾಜ್ಯ ಸರಕಾರ ಬಿಸಿಯೂಟ ಪೂರೈಸಿರುವ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ.
ಡಾ. ಕಲ್ಲಡ್ಕ ಪ್ರಭಾಕರ ಭಟ್ ಮುಂದಾಳತ್ವದ ಎರಡು ಶಾಲೆಯ ಮಕ್ಕಳ ಅನ್ನ ಕಿತ್ತುಕೊಂಡ ವಿಚಾರ ಈ ಹಿಂದೆ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಆದರೆ, ಈಗ ಎರಡೂ ಶಾಲೆಗಳ ಆಡಳಿತ ಮಂಡಳಿ ಮಧ್ಯಾಹ್ನದ ಬಿಸಿಯೂಟ ನೀಡುವಂತೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಳೆದ ವರ್ಷ ರಾಜ್ಯ ಸರ್ಕಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದ ನೆರವಿಗೆ ತಡೆ ಮಾಡಿತ್ತು. ಇದನ್ನು ವಿರೋಧಿಸಿ ಆಗಸ್ಟ್ 11 ರಂದು ನಡೆದ 'ಭಿಕ್ಷಾಂ ದೇಹಿ ಪ್ರತಿಭಟನೆ' ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತ ವಿಷಯವಾಗಿತ್ತು. ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಶೇ 90. ರಷ್ಟು ಅಹಿಂದ ವರ್ಗಕ್ಕೆ ಸೇರಿದ ಮಕ್ಕಳಿದ್ದು, ಧಾರ್ಮಿಕ ದತ್ತಿ ಇಲಾಖೆ ಮೂಲಕ ಅಲ್ಲಿಗೆ ನೀಡುತ್ತಿದ್ದ ಅನುದಾನವನ್ನು ರಾಜ್ಯ ಸರ್ಕಾರ ದಿಢೀರನೆ ರದ್ದುಗೊಳಿಸಿತ್ತು.
ಇದೇ ವೇಳೆ ಡಾ. ಪ್ರಭಾಕರ ಭಟ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕೊಲ್ಲೂರು ದೇವಳದಿಂದ ಮಕ್ಕಳ ಊಟಕ್ಕಾಗಿ ಅನುದಾನ ಕೊಡದಿದ್ದರೆ ನಾವು ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟ ಹಾಕಿಸುತ್ತೇನೆ ಎಂದು ಸವಾಲು ಹಾಕಿದ್ದರು. ಮಾತ್ರವಲ್ಲ ಕಲ್ಲಡ್ಕ ಶಾಲಾ ಮಕ್ಕಳ ಅನ್ನ ಕಿತ್ತುಕೊಂಡ ಸರಕಾರದ ವಿರುದ್ಧ ಅನೇಕ ಜನ ಕೆಂಡಾಮಂಡಲವಾಗಿದ್ದರು. ಸಾವಿರಾರು ಶಾಲಾ ಮಕ್ಕಳು ರಸ್ತೆಗಿಳಿದು ಸಚಿವ ರಮಾನಾಥ ರೈ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದ್ದರು. ಶಾಲೆಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಭಿಕ್ಷಾಂದೇಹಿ ಅಭಿಯಾನವನ್ನೂ ಆರಂಭಿಸಲಾಗಿತ್ತು. ಇದಕ್ಕೆ ಸಾವಿರಾರು ಜನರು ಸ್ಪಂದಿಸುವ ಮೂಲಕ ಲಕ್ಷಾಂತರ ರೂಪಾಯಿ ನೀಡಿದ್ದರು. ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಅಕ್ಕಿ ಭಿಕ್ಷೆಯ ಮೂಲಕವೂ ಭಾರೀ ಪ್ರಮಾಣದಲ್ಲಿ ಅಕ್ಕಿ ಸಂಗ್ರಹಗೊಂಡಿತ್ತು.
ಅಂದು ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿದ್ದ ಶಾಲೆಯ ಆಡಳಿತ ಮಂಡಳಿ ಹಾಗೂ ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬಿಸಿಯೂಟಕ್ಕಾಗಿ ಮತ್ತೊಮ್ಮೆ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಬಿಸಿಯೂಟಕ್ಕಾಗಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂಪಾಯಿ ಎಲ್ಲಿಗೆ ಹೋಗಿದೆ? ಸಂಗ್ರಹಿಸಲಾದ ಅಕ್ಕಿ ಏನಾಗಿದೆ? ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಸ್ವತಃ ಬಿ. ರಮಾನಾಥ್ ರೈ ಅವರೇ ಸರಕಾರದಿಂದ ಬಿಸಿಯೂಟ ನೀಡುವ ಪ್ರಸ್ತಾಪ ಇಟ್ಟಿದ್ದರು. ಆದರೆ ಪ್ರಸ್ಥಾಪವನ್ನು ಶಾಲಾ ಆಡಳಿತ ಮಂಡಳಿ ಹಾಗು ಡಾ.ಕಲ್ಲಡ್ಕ ಪ್ರಭಾಕರ ಭಟ್ ತಿರಸ್ಕರಿಸಿದ್ದರು. ಆದರೆ ಈಗ ಏಕಾಏಕಿ ಸರಕಾರದ ಬಿಸಿಯೂಟದ ಬಗ್ಗೆ ಒಲವು ಮೂಡಿರುವುದು ಚರ್ಚೆಗೆ ಕಾರಣವಾಗಿದೆ.