ಬೆಂಗಳೂರು , ಜೂನ್ 01 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2017-18ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಪ್ರಕಟಿಸಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಿಯು ಬೋರ್ಡ್ ನಲ್ಲಿ ಡಾ.ರಾಜ್ ಕುಮಾರ್ ಕತ್ರಿ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶವನ್ನು ಪ್ರಕಟಿಸಿದ್ದಾರೆ.
ಇಂಜಿನೀಯರಿಂಗ್ ವಿಭಾಗದಲ್ಲಿ ಶಾರದಾ ಇಂಡಿಪೆಂಡೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿ ನಾರಾಯಣ ಪೈ ದ್ವಿತೀಯ ಸ್ಥಾನ ಪಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರೆ.
ಪ್ರಥಮ ಸ್ಥಾನವನ್ನು ವಿಜಯ ಪುರದ ಎಕ್ಸಲೆನ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ ಶ್ರೀಧರ್ ದೊಡ್ಡಮನಿ ಪಡೆದುಕೊಂಡಿದ್ದಾರೆ. ಡಿಬೋರ್ಸ್ ಸನ್ಯಾಸಿ 3 ನೇ ಸ್ಥಾನ ಪಡೆದಿದ್ದಾರೆ. ಪಶುವೈದ್ಯ ವಿಭಾಗದಲ್ಲಿ ವಿನೀತ್ ಮೆಗುರು ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಜೂನ್ 25ರಿಂದ ಮೊದಲ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ. ಆಗಸ್ಟ್ 18ಕ್ಕೆ ಕೊನೆಯ ಹಂತದ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿದೆ.
ಒಟ್ಟು 1,57,580 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಬೆಂಗಳೂರಿನಲ್ಲಿ 73 ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ 343 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು. ಇದರಲ್ಲಿ 82079 ವಿದ್ಯಾ ರ್ಥಿಗಳಿದ್ದರೆ, 75501 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದರು.