ಬಂಟ್ವಾಳ, ಜೂ 01: ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ನಮಗೂ ಬಿಸಿಯೂಟ ಸೌಲಭ್ಯ ಒದಗಿಸಬೇಕು ಎಂದು ಕಲ್ಲಡ್ಡ ಶ್ರೀರಾಮ ಶಾಲೆ ಮತ್ತು ಪುಣಚ ಶ್ರೀ ದೇವಿ ಶಾಲೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಕಳೆದ ವರ್ಷ ರಾಜ್ಯ ಸರ್ಕಾರ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಗೆ ಒದಗಿಸುತ್ತಿದ್ದ ನೆರವಿಗೆ ತಡೆ ಮಾಡಿತ್ತು. ಇದನ್ನು ವಿರೋಧಿಸಿ ಆಗಸ್ಟ್ 11 ರಂದು ನಡೆದ 'ಭಿಕ್ಷಾಂ ದೇಹಿ ಪ್ರತಿಭಟನೆ' ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತ ವಿಷಯವಾಗಿತ್ತು. ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಶೇ 90. ರಷ್ಟು ಅಹಿಂದ ವರ್ಗಕ್ಕೆ ಸೇರಿದ ಮಕ್ಕಳಿದ್ದು, ಧಾರ್ಮಿಕ ದತ್ತಿ ಇಲಾಖೆ ಮೂಲಕ ಅಲ್ಲಿಗೆ ನೀಡುತ್ತಿದ್ದ ಅನುದಾನವನ್ನು ರಾಜ್ಯ ಸರ್ಕಾರ ದಿಢೀರನೆ ರದ್ದುಗೊಳಿಸಿತ್ತು.
ಇದೇ ವೇಳೆ ಡಾ. ಪ್ರಭಾಕರ ಭಟ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಕೊಲ್ಲೂರು ದೇವಳದಿಂದ ಮಕ್ಕಳ ಊಟಕ್ಕಾಗಿ ಅನುದಾನ ಕೊಡದಿದ್ದರೆ ನಾವು ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟ ಹಾಕಿಸುತ್ತೇನೆ ಎಂದು ಸವಾಲು ಹಾಕಿದ್ದರು. ಮಾತ್ರವಲ್ಲ ಕಲ್ಲಡ್ಕ ಶಾಲಾ ಮಕ್ಕಳ ಅನ್ನ ಕಿತ್ತುಕೊಂಡ ಸರಕಾರದ ವಿರುದ್ಧ ಅನೇಕ ಜನ ಕೆಂಡಾಮಂಡಲವಾಗಿದ್ದರು.
ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಕಲ್ಲಡ್ಡ ಶ್ರೀರಾಮ ಶಾಲೆ ಮತ್ತು ಪುಣಚ ಶ್ರೀ ದೇವಿ ಶಾಲೆ ಬಿಸಿಯೂಟ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅಕ್ಷರ ದಾಸೋಹದ ಅಧಿಕಾರಿಗಳು ಅರ್ಜಿ ಸ್ವೀಕರಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದೀಗ, ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶಾಲೆಯಲ್ಲಿ ಸ್ಥಗಿತಗೊಂಡಿದ್ದ ಬಿಸಿಯೂಟ ಕಾರ್ಯಕ್ರಮ ಮತ್ತೆ ಪುನಾರಂಭಗೊಂಡಿದೆ. ಬಿಸಿಯೂಟ ಪೂರೈಸಲು ನೂತನ ಸರ್ಕಾರ ಆದೇಶಿಸಿದೆ. ಶಾಲೆಯ ಪತ್ರವನ್ನು ಪರಿಗಣಿಸಿರುವ ರಾಜ್ಯ ಸರ್ಕಾರ ಬಿಸಿಯೂಟ ಪೂರೈಸಲು ಸಮ್ಮತಿಸಿದೆ. ಇದರೊಂದಿಗೆ ಪುಣಚದ ಶ್ರೀ ವಿದ್ಯಾ ಕೇಂದ್ರಕ್ಕೂ ಬಿಸಿಯೂಟ ಪೂರೈಕೆಯಾಗುತ್ತಿದೆ.