ಬೆಂಗಳೂರು, ಮೇ 31: ಇತ್ತೀಚೆಗಷ್ಟೆ ಕಾರು ಅಪಘಾತದಲ್ಲಿ ಮೃತಪಟ್ಟ ಕನ್ನಡ ಟಿವಿ ನಿರೂಪಕ ಚಂದನ್ ಅವರ ಪತ್ನಿ ಮೀನಾ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಮಗ ತುಷಾರ್ ನನ್ನು ಕತ್ತು ಕೊಯ್ದು ಹತ್ಯೆ ಮಾಡಿರುವ ಮೀನಾ ಬಳಿಕ ಆ್ಯಸಿಡ್ ಕುಡಿದು ತಾವು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೀನಾ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಚಂದನ್ ಹಾಗೂ ಗಾಯಕಿ ಸಂತೋಷಿ (24) ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟದ್ದರು.ಈ ಘಟನೆಯೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ನಡೆದಿತ್ತು.
ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪತ್ನಿ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಮನನೊಂದಿದ್ದ ಮೀನಾ ಏನಾದ್ರೂ ಮಾಡಿಕೊಳ್ಳಬಹುದೆಂದು ಆಕೆಯ ಅಣ್ಣ ಮತ್ತು ತಂದೆ ಒಂದು ವಾರದಿಂದ ಕಾವಲು ಕಾಯುತ್ತಿದ್ದರು. ಇಂದು ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮೀನಾ ಮಗನನ್ನು ಕೊಲೆಗೈದಿದ್ದಾರೆ. ತಾವು ಆತ್ಮಹತ್ಯೆಗೆ ಯತ್ನಿಸಿದ್ದರು.
ಇನ್ನು ಕುಟುಂಬದ ಇಬ್ಬರು ಸದಸ್ಯರನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಮಗುವಿನ ಕಣ್ಣುಗಳನ್ನು ದಾನ ಮಾಡಲು ಅವರ ಕುಟುಂಬ ಮುಂದಾಗಿದೆ. ಬಾಲಕ ತುಷಾರ್ನ ಎರಡು ಕಣ್ಣುಗಳ ದಾನಕ್ಕೆ ನಿರ್ಧರಿಸಲಾಗಿದ್ದು, ಅಭಿಷೇಕ ನೇತ್ರಾಲಯ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ.