ಮಂಗಳೂರು, ಮೇ 31 : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಂಗಳವಾರ ಸುರಿದ ಮಳೆಗೆ ಇಬ್ಬರು ಪ್ರಾಣವನ್ನು ಕಳೆದುಕೊಂಡಿದ್ದು, ಮನೆಹಾನಿ, ಇತರ ಸಾರ್ವಜನಿಕ ಆಸ್ತಿಪಾಸ್ತಿ ಸೇರಿದಂತೆ ಒಟ್ಟು 20.74 ಕೋಟಿ ರೂಪಾಯಿಗಳ ನಷ್ಟವನ್ನು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸುಮಾರು ಆರು ಗಂಟೆಗಳ ಕಾಲ ಅವಧಿಯಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದೆ. 36.8 ಸೆಂ.ಮೀ ಮಳೆ ಸುರಿದಿದ್ದು, ರಸ್ತೆ, ವಿದ್ಯುತ್ ಪರಿಕರ ಮುಂತಾದ ಸಾರ್ವಜನಿಕ ಅಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿದೆ
೩೫ ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಇದರಲ್ಲಿ ಮಂಗಳೂರು ತಾಲೂಕಿನಲ್ಲಿಯೇ 30 ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಮನೆಗಳ ನಾಶದಿಂದ ಒಟ್ಟು 78.33 ಲಕ್ಷ ರೂ.ಗಳನ್ನು ಅಂದಾಜಿಸಲಾಗಿದೆ. ಒಟ್ಟು 42 ಮನೆಗಳಿಗೆ ಬಹುತೇಕ ಹಾನಿಯಾಗಿದ್ದು, ಮಂಗಳೂರಿನಲ್ಲಿಯೇ 22 ಮನೆಗಳು ಕುಸಿದಿವೆ ಎಂದರು. ರಾಜಕಾಲುವೆಗಳನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ತೆರವಿಗೆ ದಿಟ್ಟ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಂಗಾರು ಮಳೆಯನ್ನು ಎದುರಿಸಲು ಒಂದು ತಿಂಗಳ ಮುನ್ನವೇ ಜಿಲ್ಲಾಡಳಿತ ಕ್ರಮವನ್ನು ಕೈಗೊಂಡಿತ್ತು. ಆದರೆ ವಾಯುಭಾರ ಕುಸಿತದಿಂದ ಸತತ ಆರು ಗಂಟೆಗಳ ಕಾಲ ಸುರಿದ ಮಳೆಯನ್ನು ಗ್ರಹಿಸಲು ಅಸಾಧ್ಯವಾಗಿ ಹಲವು ಸಮಸ್ಯೆ ಎದುರಿಸಬೇಕಾಯಿತು ಎಂದರು.