ಮಂಗಳೂರು, ಮೇ 30: ಮನೆಹಾನಿ ಹಾಗೂ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಪರಿಹಾರ ವಿತರಣೆಗೆಂದು ಜಿಲ್ಲಾಡಳಿತಕ್ಕೆ ಈಗಾಗಲೇ ಸರಕಾರದಿಂದ 3 ಕೋಟಿ ರೂ. ಬಿಡುಗಡೆ ಮಾಡಿದ್ದು ಪರಿಹಾರ ವಿತರಣೆಗೆ ಹಣದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಈಗಾಗಲೇ ತಿಳಿಸಿದ್ದಾರೆ ಎಂದು ಐವನ್ ಡಿಸೋಜಾ ಹೇಳಿದರು.ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಮಳೆಯಿಂದಾಗಿ ಸುಮಾರು 52 ಮನೆಗಳಿಗೆ ಹಾನಿಯಾಗಿದ್ದು, ಬಂಟ್ವಾಳದಲ್ಲಿ 16 ಮನೆಗಳಿಗೆ ಹಾನಿಯಾಗಿದೆರುವ ಬಗ್ಗೆ ವರದಿಯಾಗಿದೆ. ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಜಿಲ್ಲಾಡಳಿತ ಹಾಗೂ ನಗರ ಪಾಲಿಕೆಯು ಇಂದು ಸಂಜೆಯಿಂದ ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ ಎಂದು ಐವನ್ ಡಿಸೋಜಾ ಹೇಳಿದರು.
ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಮೇ ೩೦ರ ಬುಧವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಕೃತಕ ಪ್ರವಾಹ ಸೃಷ್ಟಿಯಾಗಲು ಕಾರಣವಾಗಿರುವ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸುವ ಸಲುವಾಗಿ ಜಿಲ್ಲಾಧಿಕಾರಿ ಸಮಿತಿ ರಚಿಸಿದ್ದು, ಮೂರು ದಿನಗಳೊಳಗೆ ಸಮಿತಿ ವರದಿ ನೀಡಲಿದೆ. ಇನ್ನು ಸಂತ್ರಸ್ತರಿಗಾಗಿ ನಗರದಲ್ಲಿ ಏಳು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನಗರ ಪಾಲಿಕೆಯ ಆಯುಕ್ತರ ಜತೆಯಲ್ಲೂ ಚರ್ಚಿಸಲಾಗಿದ್ದು, ಪಾಲಿಕೆಯಿಂದ ಸಾಧ್ಯವಾಗುವ ಎಲ್ಲಾ ರೀತಿಯ ಪರಿಹಾರ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.