ಮಂಗಳೂರು, ನ.05 (DaijiworldNews/PY): "ಕರಾವಳಿಯಲ್ಲಿ ಆಂತರಿಕ ಭದ್ರತೆಗೆ, ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ಕೊಡಲು ನಿರ್ಧರಿಸಲಾಗಿದೆ. ಆರು ತಿಂಗಳಿನಲ್ಲಿ ಕರಾವಳಿಯಲ್ಲಿ ಬದಲಾವಣೆಯಾಗಲಿದೆ" ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಂಗಳೂರಿನ ಸಿವಿ ರಮಣ ಪೈ ಹಾಲ್ನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಬಳಿಕ ನಡೆದ ಕೋರ್ ಕಮಿಟಿಯಲ್ಲಿ ಮಾತನಾಡಿದ ಅವರು, "ಮಂಗಳೂರಿನಲ್ಲಿ 20 ವರ್ಷಗಳ ನಂತರ ರಾಜ್ಯಕಾರ್ಯಕಾರಿಣಿ ಸಭೆಯಾಗುತ್ತಿದೆ. ರಾಜ್ಯಾಧ್ಯಕ್ಷರಾದ ಬಳಿಕ ನಳಿನ್ ಕುಮಾರ್ ಕಟೀಲ್ ಅವರು ಪಕ್ಷ ಬಲಪಡಿಸಿದ್ದಾರೆ. ಎರಡು ವರ್ಷಗಳ ಬಳಿಕ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ. 2014ರಲ್ಲಿ ಬಿಜೆಪಿ 104 ಸೀಟ್ ಗಳಿಸಿತ್ತು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 18 ಮಂದಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿಗೆ ಸೇರಿದ್ದರು. 18 ಜನರ ಸಹಕಾರದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಬಿಜೆಪಿ ಕಾರ್ಯಕರ್ತರು ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಅಭ್ಯರ್ಥಿಗಳ ಗೆಲುವಿಗೆ ಸಂಪೂರ್ಣ ಪರಿಶ್ರಮವನ್ನು ಹಾಕಬೇಕು" ಎಂದರು.
"ಕರಾವಳಿಯಲ್ಲಿ ಆಂತರಿಕ ಭದ್ರತೆಗೆ ಪ್ರಾಶಸ್ತ್ಯ ಕೊಡಲು ನಿರ್ಧರಿಸಲಾಗಿದೆ. ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುತ್ತೇವೆ. ಆರು ತಿಂಗಳಿನಲ್ಲಿ ಕರಾವಳಿಯಲ್ಲಿ ಬದಲಾವಣೆಯಾಗಲಿದೆ. ಸಾಗರದ ಅಲೆಗಳಿಂದ ವಿದ್ಯುತ್ ಉತ್ಪಾದನೆಗೂ ಕ್ರಮ ಕೈಗೊಂಡಿದ್ದೇವೆ" ಎಂದು ತಿಳಿಸಿದರು.
ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸ್ಥಿತಿ ಗತಿಯ ಬಗ್ಗೆ ಮಾತನಾಡಿದ ಅವರು, "ರಾಜ್ಯದಲ್ಲಿ ಕೊರೊನಾ ನಿಯಂತ್ರಣ ಸ್ಥಿತಿಯಲ್ಲಿದೆ. ಆದರೆ ಇನ್ನೂ ಹಲವು ತಿಂಗಳು ಕೊರೊನಾ ನಿಯಮ ಪಾಲಿಸಬೇಕಾಗಿದೆ" ಎಂದರು.
ಇನ್ನು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಲವ್ ಜಿಹಾದ್ ತಡೆಗೆ ಕಾನೂನು ಜಾರಿ ಬಗ್ಗೆ ಮಾತನಾಡಿದ ಅವರು, "ಲವ್ ಜಿಹಾದ್ ಹೆಸರಲ್ಲಿ ಮತಾಂತರವಾಗುತ್ತಿದೆ. ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆಯಾಗುತ್ತಿದೆ. ಕರ್ನಾಟಕದಲ್ಲಿ ಈ ವ್ಯವಸ್ಥೆ ಕೊನೆ ಮಾಡುತ್ತೇವೆ. ಮತಾಂತರದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ" ಎಂದು ಸ್ಪಷ್ಟನೆ ನೀಡಿದರು.
ಉಪಚುನಾವಣೆಯ ಬಗ್ಗೆ ಮಾತನಾಡಿದ ಅವರು, "ಆರ್.ಆರ್ ನಗರದಲ್ಲಿ ಬಿಜೆಪಿಗೆ 40 ಸಾವಿರ ಮತಗಳ ಅಂತರದ ಗೆಲುವಾಗಲಿದೆ. ಶಿರಾದಲ್ಲಿ 25 ಸಾವಿರ ಮತಗಳ ಅಂತರದ ಗೆಲುವಾಗಲಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ದಯನೀಯ ಸೋಲನ್ನು ಅನುಭವಿಸುತ್ತದೆ. 10ನೇ ತಾರೀಕಿನಂದು ಫಲಿತಾಂಶದಲ್ಲಿ ವಿಪಕ್ಷಗಳಿಗೆ ಉತ್ತರ ಸಿಗಲಿದೆ" ಎಂದು ಸಿಎಂ ಬಿಎಸ್ವೈ ವಿಶ್ವಾಸ ವ್ಯಕ್ತಪಡಿಸಿದರು.
"ರಾಜ್ಯದಲ್ಲಿ ಹಣಕಾಸಿನ ವ್ಯವಸ್ಥೆ ಸುಧಾರಣೆಯಾಗುತ್ತಿದೆ. ಶಾಸಕರಿಗೆ 50 ಲಕ್ಷದ ಅನುದಾನ ಬಿಡುಗಡೆಯಾಗಲಿದೆ. ಮಂಗಳೂರು ನಗರ ಆಡಳಿತಕ್ಕೆ 125 ಕೋಟಿ ರೂ ಅನುದಾನ ಸಿಗಲಿದೆ. ಈಗಾಗಲೇ 50 ಕೋಟಿ ಅನುದಾನ ಬಿಡುಗಡೆ ಮಾಡಿದ್ದೇನೆ. ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಉತ್ತಮ ಕೆಲಸವಾಗುತ್ತಿದೆ" ಎಂದರು.
ಡ್ರಗ್ಸ್ ಮಾಫಿಯಾ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮಟ್ಟಹಾಕಲಾಗುತ್ತಿದೆ. ಡ್ರಗ್ಸ್ ಮುಕ್ತ ರಾಜ್ಯಕ್ಕಾಗಿ ಬಿಗಿಯಾದ ಕ್ರಮ ಕೈಗೊಂಡಿದ್ದೇವೆ" ಎಂದರು.
ಈ ಸಂದರ್ಭ, ರಾಜ್ಯಾಧ್ಯಕ್ಷ ಕಟೀಲ್, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಸದಾನಂದ ಗೌಡ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ.