ವಿಶೇಷ ವರದಿ: ತೇಜಸ್ ಸುಳ್ಯ
ತೊಡಿಕಾನ, ಮೇ 30 : ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದ ದ.ಕ ಕೊಡಗು ಗಡಿಭಾಗದಲ್ಲಿ ಕಾಡಾನೆಗಳ ಸಂಚಾರ ಹೆಚ್ಚಿದ್ದು ಗಡಿಭಾಗದ ಜನರು ಆತಂಕಗೊಂಡಿದ್ದಾರೆ. ಕಾಡಾನೆ ದಾಳಿಯಿಂದ ಸುಳ್ಯ ತಾಲೂಕಿನ ರೈತರು ಸಂಕಷ್ಟಗೊಳಗಾಗಿದ್ದಾರೆ. ಆನೆ ದಾಳಿಯಿಂದ ಹೈರಾಣಾಗಿರುವ ತಾಲೂಕಿನ ಅಜ್ಜಾವರ, ಮಂಡೆಕೋಲು. ತೊಡಿಕಾನ,ಕೊಲ್ಲಮೊಗ್ರ ಗ್ರಾಮದ ರೈತರಿಗೆ ಸಂಕಟದಿಂದ ಪಾರಾಗುವ ಯಾವುದೇ ದಾರಿ ಕಾಣುತ್ತಿಲ್ಲ. ಕಾಡಾನೆ ದಾಳಿ ರೈತರ ಬದುಕನ್ನೇ ಕಸಿದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿಯವರೆಗೆ ಅರಣ್ಯ ಇಲಾಖೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ ಎಂಬುದು ಕೃಷಿಕರ ಅಳಲು.
ಪ್ರತಿ ವರ್ಷ ಅಜ್ಜಾವರ ,ಮಂಡೆಕೋಲು,ತೊಡಿಕಾನ ಗ್ರಾಮಗಳ ರೈತರ ಕೃಷಿ ತೋಟಗಳಿಗೆ ನಿರಂತರ ಕಾಡಾನೆಗಳು ದಾಳಿ ಇಡುತ್ತಿದ್ದು. ತೆಂಗಿನ ಮರ, ಅಡಿಕೆ ಮರ ಹಾಗೂ ಬಾಳೆ ಕೃಷಿಗಳನ್ನು ನಾಶ ಮಾಡುತ್ತಿವೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಭಾಗಗಳಲ್ಲಿ ಕಾಡಾನೆಗಳು ನಿರಂತರವಾಗಿ ದಾಳಿ ಇಡುತ್ತಿವೆ. ಪರಿಣಾಮವಾಗಿ ರೈತರು ಲಕ್ಷಾಂತರ ರೂಪಾಯಿ ನಷ್ಟಕೊಳಗಾಗುತ್ತಿದ್ದಾರೆ.ಅರಣ್ಯ ಇಲಾಖೆಯವರು ಬಳಿ ನೋವು ತೋಡಿಕೊಂಡರೆ ಆನೆ ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಹೊರತು ರೈತರಿಗೆ ಸಂಭವಿಸಿದ ಕಷ್ಟ ನಷ್ಟಗಳಿಗೆ ಸ್ಪಂದನ ಕಡಿಮೆ.
ಈ ಭಾಗದಲ್ಲಿ ನಿರಂತರ ಆನೆ ದಾಳಿಯಿಂದ ಕೃಷಿ ನಾಶಗೊಂಡಿದ್ದು, ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಆನೆಗಳನ್ನು ಓಡಿಸುವ ಯಾವ ಪ್ರಯತ್ನಗಳು ಕೂಡ ಕೈಹಿಡಿಯುತ್ತಿಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಕೂಡ ಆನೆಗಳನ್ನು ಓಡಿಸಲಾಗದೆ ಕೈಚೆಲ್ಲಿ ಕುಳಿತಿದಿದೆ..ಕೃಷಿ ತೋಟಗಳಿಗೆ ಕಾಡಾನೆಗಳು ಲಗ್ಗೆ ಇಡುತ್ತಿರುವುದು ಇಂದು ನಿನ್ನೆ ಸಮಸ್ಯೆಯಲ್ಲ. ಈ ಭಾಗದ ಗ್ರಾಮಗಳ ಜನರಿಗೆ ಇದೊಂದು ಶಾಶ್ವತ ಸಮಸ್ಯೆಯಾಗಿ ಉಳಿದುಕೊಂಡಿದೆ.ರಾತ್ರಿ ಸಮಯದಲ್ಲಿ ಈ ಗ್ರಾಮಗಳ ಜನರು ಸರಿಯಾಗಿ ನಿದ್ರೆ ಮಾಡಿಕೊಳ್ಳಲು ಹೆದರಿ ಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಕಾಡಾನೆ ದಾಳಿಗೆ ಸಂಭವಿಸಿದ ಕಷ್ಟ,ನಷ್ಟಗಳಿಗೆ ಸರಕಾರ ಪರಿಹಾರ ನೀಡಬೇಕು .ಕಾಡಾನೆಗಳು ಕೃಷಿ ತೋಟಗಳಿಗೆ ದಾಳಿ ಇಡದಂತೆ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಭಾಗದ ಜನರ ಬೇಡಿಕೆಯಾಗಿದೆ. ಮುಂದಿನ ದಿನಗಳಾದರೂ ಸರಕಾರ ಎಚ್ಚೆತ್ತಕೊಳ್ಳಲಿ ಎನ್ನುವುದು ಸ್ಥಳೀಯರ ಒತ್ತಾಯ.