ಸೆಪ್ಟೆಂಬರ್,24: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ ಖಾಸಗಿ ಏಜೆನ್ಸಿಯೊಂದು ಉಡುಪಿಯ ಜೆಸಿಂತಾ ಅವರನ್ನು ಶ್ರೀಮಂತರಿಗೆ ದುಬಾರಿ ಬೆಲೆಗೆ ಮಾರಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ವಂಚಿಸುವ ಏಜೆನ್ಸಿಗಳ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.ಇಂತಹ ಏಜೆನ್ಸಿಗಳ ಮೇಲೆ ನಿಗಾವಿರಿಸುವುದರ ಜತೆಗೆ ಇಂತಹ ಪ್ರಕರಣಗಳು ಮತ್ತೆ ಪುರ್ನಾವರ್ತನೆಯಾದರೆ ಸದರಿ ಏಜೆನ್ಸಿಗಳ ವಿರುದ್ದ ಕಠಿಣ ಕ್ರಮ ಕೈ ಗೊಳ್ಳುವಂತೆ ಪೋಲೀಸ್ ಮಹಾನಿರ್ದೇಶಕರಿಗೆ ಆದೇಶಿಸಿದ್ದಾರೆ.
ಉದ್ಯೋಗದ ಭರವಸೆ ನೀಡಿ ಅಮಾಯಕರನ್ನು ವಂಚಿಸುವ ಮೋಸದ ಜಾಲದ ಮೇಲೆ ಸದಾ ನಿಗಾ ಇಡಬೇಕು.ಯಾವುದೇ ಪ್ರಕರಣಗಳಲ್ಲಿ ಇಂತಹ ವಂಚನೆಯ ಸುಳಿವು ಸಿಕ್ಕರೆ ತಕ್ಷಣ ಅಂತಹ ಏಜೆನ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಪ್ರಕರಣದ ಹಿನ್ನಲೆ :
ಉಡುಪಿಯ ಜೆಸಿಂತಾ (46) ಗಂಡನನ್ನು ಕಳೆದುಕೊಂಡ ಕಾರಣ, ಮೂರು ಮಕ್ಕಳನ್ನು ಸಲಹುವ ಸಲುವಾಗಿ ಉದ್ಯೋಗ ಅರಸತೊಡಗಿದರು.
ಈ ಸಂದರ್ಭದಲ್ಲಿ ಮುಂಬೈನ ಟ್ರಿಯೋ ಟ್ರಾಕ್ ಟ್ರಾವಲ್ ಏಜೆನ್ಸಿಯು ನೀಡಿದ ಕತಾರ್ ನಲ್ಲಿ ಮಾಸಿಕ ಇಪ್ಪತ್ತೈದು ಸಾವಿರ ರೂಗಳ ವೇತನದ ಜಾಹೀರಾತು ನಂಬಿ ಅರ್ಜಿ ಸಲ್ಲಿಸಿದ್ದರು.
ಆದರೆ ಈ ಏಜೆನ್ಸಿ, ಹರಾಜಿನಲ್ಲಿ ೫ ಲಕ್ಷಕ್ಕೆ ಜೆಸಿಂತಾ ಅವರನ್ನು ಸೌದಿ ಅರೇಬಿಯಾದ ಅಬ್ದುಲ್ಲಾ ಅಲ್ ಮುತೈರಿ ಎಂಬ ಶ್ರೀಮಂತನಿಗೆ ಮಾರಿತ್ತು.
ಆದರೆ ಇದರ ಅರಿವಿಲ್ಲದ ಜೆಸಿಂತಾ ಕತಾರ್ ನಲ್ಲಿ ಸೌದಿ ಅರೇಬಿಯಾದಲ್ಲ್ಲಿ ವ್ಯಕ್ತಿಯಿಂದ ಚಿತ್ರಹಿಂಸೆಗೊಳಗಾಗಿದ್ದರು. ಒಂಭತ್ತು ತಿಂಗಳ ಬಳಿಕ ಶತ ಪ್ರಯತ್ನ ಮಾಡಿ ಊರಿನಲ್ಲಿರುವ ತನ್ನ ಮಕ್ಕಳಿಗೆ ದೂರವಾಣಿ ಕರೆ ಮಾಡಿ,ತಮ್ಮ ದಯನೀಯ ಪರಿಸ್ಥಿತಿ ತಿಳಿಸಿದ್ದರು . ತಕ್ಷಣ ಕಾರ್ಯನಿರತರಾದ ಉಡುಪಿಯ ಮಾನವ ಹಕ್ಕಗಳ ರಕ್ಷಣಾ ಪ್ರತಿಷ್ಟಾನ ,ಕೇಂದ್ರ ಸರ್ಕಾರ ಹಾಗೂ ಗಲ್ಪ್ ರಾಷ್ಟ್ರಗಳಲ್ಲಿನ ಕನ್ನಡಿಗ ಸಂಘಟನೆಗಳ ನೆರವಿನಿಂದ ಜೆಸಿಂತಾ ಅವರನ್ನು ರಕ್ಷಿಸಿ ಜೆಸಿಂತಾ ಕರೆತರಲಾಯಿತು.
ಕಾರ್ಕಳ ತಾಲ್ಲೂಕಿನ ಮುದರಂಗಡಿ ಗ್ರಾಮದ ನಿವಾಸಿಯಾದ ಜೆಸಿಂತಾ ಈಗ ಅನಾರೋಗ್ಯದಿಂದಾಗಿ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು,ಕ್ಷಯ,ರಕ್ತಹೀನತೆಯಿಂದ ಬಳಲಿ ಮಾನಸಿಕ,ದೈಹಿಕ ಖಿನ್ನತೆಯಿಂದ ನರಳುತ್ತಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇಂತಹ ಪ್ರಕರಣದ ವಿವರ ಬಹಿರಂಗವಾಗುತ್ತಿದ್ದಂತೆಯೇ ಗೃಹ ಸಚಿವ ರಾಮಲಿಂಗಾರೆಡ್ಡಿ ತಕ್ಷಣವೇ ಪೋಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದ್ದು,ಇನ್ನು ಮುಂದೆ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.
ಉದ್ಯೋಗ ಕೊಡಿಸುವುದಾಗಿ ಅಮಾಯಕರನ್ನು ವಂಚಿಸುವ ಖಾಸಗಿ ಏಜೆನ್ಸಿಗಳ ಮೇಲೆ ಹದ್ದುಗಣ್ಣಿಡಲು ಅವರು ಸೂಚಿಸಿದ್ದು ಇಂತಹ ಪ್ರಕರಣಗಳು ಗಮನಕ್ಕೆ ಬಂದ ತಕ್ಷಣ,ಅವುಗಳನ್ನೇ ಇದಕ್ಕೆ ಹೊಣೆಯನ್ನಾಗಿಸಬೇಕು.ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಆದೇಶಿಸಿದ್ದಾರೆ.