ಮಂಗಳೂರು, ಮೇ 29: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆ ಅಲ್ಲೊಲ ಕಲ್ಲೊಲವನ್ನೆ ಸೃಷ್ಠಿಸಿದೆ.ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿಗೆ ಮೂರು ದಿನಗಳ ಹಿಂದೆಯೇ ಮುಂಗಾರು ಪ್ರವೇಶಿಸಿದ್ದು ಪರಿಣಾಮ ಭಾರೀ ಗಾಳಿ ಮಳೆಯಾಗುತ್ತಿದೆ. ಇನ್ನು ನಗರದ ಬಹುತೇಕ ಭಾಗದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿದ್ದು ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪಡೀಲ್ ಅಂಡರ್ ಬ್ರಿಡ್ಜ್, ಕೂಳೂರು, ಕುತ್ತಾರು ಮುಖ್ಯರಸ್ತೆ, ಹಂಪನಕಟ್ಟೆ ಸೆಂಟ್ರಲ್ ರೈಲ್ವೆ ನಿಲ್ದಾಣ , ಯೆಯ್ಯಾಡಿ, ಶರ್ಬತ್ ಕಟ್ಟೆ, ಬಿಜೈ , ತೊಕ್ಕೊಟ್ಟು ಮುಂತಾದೆಡೆ ಕೃತಕ ಪ್ರವಾಹ ಸೃಷ್ಟಿಯಾಗಿದೆ. ಬಿಜೈ ಮತ್ತು ಹಂಪನಕಟ್ಟೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ವಾಹನಗಳು ಕೃತಕ ನೆರೆಯಲ್ಲಿ ಮುಳುಗಡೆಯಾಗಿದ್ದು, ಪಂಪವೆಲ್ ನಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದು ನೀರಿನಲ್ಲಿ ಕೊಚ್ಚಿ ಹೋದ ಮಾಹಿತಿ ಲಭ್ಯವಾಗಿದೆ.
ಕರಾವಳಿಯ ಕಡಲ ತೀರದಲ್ಲಿ ದಿನದಿಂದ ದಿನಕ್ಕೆ ಕಡಲ ಅಲೆಗಳು ಮೇಲೇರಿ ಬರುತ್ತಿವೆ. ಕಡಲಿನ ಅಬ್ಬರಕ್ಕೆ ಕರಾವಳಿಯ ಜನರು ಆತಂಕ ಪಡುತ್ತಿದ್ದಾರೆ. ಕಡಲ ತೀರದಲ್ಲಿ ಸಮುದ್ರದ ಸುಮಾರು 500 ಮೀ. ದೂರದಿಂದಲೇ ಅಲೆಗಳು ಮೇಲೇರಿ ಬರುತ್ತಿರುವೆ. ಭಾರಿ ಗಾತ್ರದ ಅಲೆಗಳು ಸಮುದ್ರಕ್ಕೆ ಬರುತ್ತಿರುವ ಹಿನ್ನಲೆಯಲ್ಲಿ ಪಣಂಬೂರು ,ತಣ್ಣಿರುಬಾವಿ ಬೀಚ್ ಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿ ಮುಖವಾಗಿದೆ.