ಮಂಗಳೂರು ಸೆ24 : ಕಾನೂನು ಬಾಹಿರವಾಗಿ ವಾಹನಗಳಿಗೆ ನಕಲಿ ದಾಖಲೆಪತ್ರಗಳನ್ನು ಸೃಷ್ಟಿಸಿ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಶನಿವಾರ ಬೇಧಿಸಿದ್ದರೆ. ಆರೋಪಿಗಳು ಇಷ್ಟೇ ಅಲ್ಲದೆ ನಕಲಿ ನೋಂದಣಿ ನಂಬರ್ ಪ್ಲೇಟ್ ಅಳವಡಿಸಿ ವಾಹನಗಳನ್ನು ಉಪಯೋಗಿಸುತ್ತಿದ್ದ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಿ ಉಳಾಯಿಬೆಟ್ಟು ಮಂಜಗುಡ್ಡೆಯ ನವೀನ್ ನೊರೋನ್ಹಾ(41) ಬಂಧಿಸಿದ್ದಾರೆ. ಇನ್ನಿಬ್ಬರು ಪ್ರಮುಖ ಆರೋಪಿಗಳಾದ ಬೆಂದೂರಿನ ವಿನ್ಸೆಂಟ್ ಸಿಕ್ವೇರಾ (59) ಮತ್ತು ನೀರುಮಾರ್ಗದ ವಿಲ್ಫ್ರೆಡ್ ಮಸ್ಕರೇನ್ಹಸ್ (30) ಹಾಗೂ ಇತರರ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತ ಆರೋಪಿಗಳಿಂದ 81,9000 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ ವಿವರ: ಮಂಗಳೂರು ಮೂಡು ಶೆಡ್ಡೆ ಮಧ್ಯೆ ಸಂಚರಿಸುವ 3ಬಿ 3ಬಿ (ಕೆಎ-19- ಬಿ-4866) ಬಸ್ಸಿಗೆ ನಕಲಿ ನೋಂದಣಿ ಸಂಖ್ಯೆ ಅಳವಡಿಸಿ ಸಂಚಾರ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಯನ್ವಯ ಆ ಬಸ್ಸನ್ನು ಮೂಡುಶೆಡ್ಡೆ ಬಳಿ ಪರಿಶೀಲಿಸಿದಾಗ ಆ ಬಸ್ಸಿಗೆ ಬೇರೆ ಬಸ್ಸಿನ ಚಾಸಿಸ್ ನಂಬ್ರ ಹಾಗೂ ನೋಂದಣಿ ಸಂಖ್ಯೆ ಅಳವಡಿಸಿ ಓಡಾಟ ನಡೆಸುತ್ತಿರುವುದು ಪತ್ತೆಯಾಯಿತು. ಈ ರೀತಿಯಾಗಿ ವಾಹನದ ನಂಬ್ರವನ್ನು ಬದಲಾವಣೆ ಮಾಡಿದ ಆರೋಪಿ ನವೀನ್ ನೊರೋನ್ಹಾನನ್ನು ವಶಕ್ಕೆ ಪಡೆಯಲಾಯಿತು. ಆತನನ್ನು ವಿಚಾರಿಸಿದಾಗ ಆತ ಈ ಬಸ್ಸನ್ನು ವ್ಯಕ್ತಿಯೊಬ್ಬರಿಂದ ಖರೀದಿಸಿ ಅದಕ್ಕೆ ತನ್ನ ಮಾಲಕತ್ವದ ಬಸ್ಸಿನ ಚಾಸಿಸ್ ನಂಬ್ರವನ್ನು ವಿನ್ಸೆಂಟ್ ಸಿಕ್ವೇರಾ ಮಾಲಕತ್ವದ ನಗರದ ಪಂಪ್ವೆಲ್ ನ್ಯಾಶನಲ್ ಎಂಜಿನಿಯರಿಂಗ್ ವರ್ಕ್ನಲ್ಲಿ ಅಳವಡಿಸಲಾಗಿವುದು ಬೆಳಕಿಗೆ ಬಂತು. ಇದೇ ರೀತಿ ನವೀನ್ ನೊರೋನ್ಹಾ ನೀಡಿದ ಮಾಹಿತಿಯಂತೆ ನೀರುಮಾರ್ಗ ವಿಲ್ಫ್ರೆಡ್ ಮಸ್ಕರೇನ್ಹಸ್ ಮಾಲ ಕತ್ವದ 2 ಟ್ರಕ್, 1 ಜೆಸಿಬಿ, ನಕಲಿ ಚಾಸಿಸ್ ನಂಬ್ರ ಸೃಷ್ಟಿ ಮಾಡಲು ಉಪಯೋಗಿಸಿದ ಉಪಕರಣ ವಶಪಡಿಸಿಕೊಳ್ಳಲಾಗಿದೆ. ಇವಿಷ್ಟೇ ಅಲ್ಲದೇ ನಕಲಿ ದಾಖಲೆ ಪತ್ರ ಸೃಷ್ಟಿಸಿ ಆರ್ಟಿಒ ಇಲಾಖೆಯ ನಕಲಿ ಸಹಿ ಮೊಹರು ಸೃಷ್ಟಿಸಿ ಸಂಬಂಧಪಟ್ಟ ಇಲಾಖೆಗೆ ಹಾಗೂ ಹಣಕಾಸು ಸಂಸ್ಥೆಗಳಿಗೆ ಮೋಸ ಮತ್ತು ವಂಚನೆ ಮಾಡಿದ್ದರು ಎಂದು ತನಿಖೆಯಲ್ಲಿ ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಜಾಲದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಇರೋ ಶಂಕೆ ವ್ಯಕ್ತವಾಗಿದೆ.