ಮಂಗಳೂರು, ಮೇ 28: ರಸ್ತೆ ಅಂದಮೇಲೆ ವಾಹನ ಸಂಚಾರಕ್ಕೆ ಉತ್ತಮವಾಗಿರಬೇಕು, ಕನಿಷ್ಟ ಪಕ್ಷ ಪಾದಚಾರಿಗಳು ಓಡಾಡುವ ಮಟ್ಟಿಗಾದರೂ ಇರಬೇಕು, ಆದರೆ ಇಲ್ಲಿನ ರಸ್ತೆ ಎಷ್ಟು ಹದಗೆಟ್ಟಿದೆ ಅಂದರೆ ಸಾಲು ಸಾಲು ಬಾಳೆ ಕೃಷಿ ಮಾಡುವಷ್ಟು.
ಸಂಚಾರಕ್ಕೆ ಅಯೋಗ್ಯವಾಗಿರುವ ರಸ್ತೆ ದುರಸ್ತಿಗಾಗಿ ಆಗ್ರಹಿಸಿದ ನಗರ ಜಿಎಸ್ ಬಿ ಕಾಲೋನಿಯ ನಿವಾಸಿಗಳು, ರಸ್ತೆ ರಿಪೇರಿ ಮಾಡುವಂತೆ ಒತ್ತಾಯಿಸಿ ಮೇ 28 ರ ಸೋಮವಾರ ಹದಗೆಟ್ಟ ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟಿಸಿದರು.
ಮಂಗಳೂರಿನ ಕದ್ರಿ ರಸ್ತೆಯ ಜಿಎಸ್ ಬಿ ಕಾಲೋನಿಯಿಂದ ಕದ್ರಿ ಕಂಬಳ -ಪಿಂಟೋಸ್ ಲೇನ್ ಸಂಪರ್ಕಿಸುವ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ, ಮೂರು ತಿಂಗಳ ಹಿಂದೆ, ಅಂದರೆ ಮಾರ್ಚ್ 6 ರಂದು ಅಗೆದು ಹಾಕಲಾಗಿತ್ತು. ಆದರೆ ಇದೀಗ ಮೂರು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಈ ರಸ್ತೆಯನ್ನೇ ಅವಲಂಬಿಸಿಕೊಂಡಿರುವ ಸ್ಥಳೀಯರು ಪರದಾಡುವಂತಾಗಿದೆ. ಅತ್ತ ಸಂಚಾರಕ್ಕೆ ಅಯೋಗ್ಯವಾಗಿ ಡಾಂಬರೇ ಕಾಣದಂತೆ ಮಣ್ಣು ತುಂಬಿಕೊಂಡಿರುವ ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿರುವ ನಿವಾಸಿಗಳ ಓಡಾಟಕ್ಕೆ ಈ ರಸ್ತೆ ಬಿಟ್ಟು ಬದಲಿ ರಸ್ತೆಯಿಲ್ಲ. ಚುನಾವಣೆ ಸಮಯದಲ್ಲಿ ಅಶ್ವಾಸನೆ ಇತ್ತ ಜನಪ್ರತಿನಿಧಿಗಳು ಬಳಿಕ ಇತ್ತ ತಲೆ ಹಾಕಿಲ್ಲ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ನನ್ನ ಪತಿಯನ್ನು ಕರೆತರುವ ಸಂದರ್ಭದಲ್ಲಿ ವಾಹನದಿಂದ ದಾರಿ ಮದ್ಯೆ ಇಳಿಸಿ ಸ್ಟ್ರೆಚ್ಚರ್ ನಲ್ಲಿ ಹೊತ್ತು ಮನೆಗೆ ಕರೆತರಬೇಕಾಯಿತು. ಇದು ನಮ್ಮೊಬ್ಬರ ಪರಿಸ್ಥಿತಿಯಲ್ಲ. ನಮ್ಮ ಕಾಲೋನಿಲ್ಲಿರುವ ಮನೆಗಳಲ್ಲಿ ಹೆಚ್ಚಾಗಿ ವಯೋವೃದ್ದರು, ಹಾಗೂ ರೋಗಿಗಳಿದ್ದು ಎಲ್ಲರೂ ಮುಖ್ಯ ರಸ್ತೆಯವರೆಗೆ ನಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಯಾದ ವಯೋವೃದ್ದೆ ಸಿಸಿಲಿಯಾ ಪಿಂಟೋ.
ಹೊಂಡ ಗುಂಡಿಗಳಿಂದ ಕೂಡಿದ ಈ ರಸ್ತೆಯಲ್ಲಿ ಕೆಲವೆಡೆ ಡಾಂಬರಿನ ಲವಲೇಷವೂ ಇಲ್ಲದಂತೆ ಮಣ್ಣು ತುಂಬಿಕೊಂಡಿದೆ. ಇನ್ನು ಮಳೆ ಬಂದರೆ ಇಲ್ಲಿನ ರಸ್ತೆಯ ಪರಿಸ್ಥಿತಿ ವಿವರಿಸಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕೆಲವೊಮ್ಮೆ ಮಣ್ಣಿನಲ್ಲಿ ಸಿಲುಕಿ ಮುಂದಕ್ಕೆ ಹೋಗದೆ ಪರದಾಡುವ ಸ್ಥಿತಿ ಪ್ರತಿನಿತ್ಯ ಕಾಣಸಿಗುತ್ತದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಕ್ಯಾರಲಿನ್ ಡಿಸೋಜಾ
ಸಾಕಷ್ಟು ಬಾರಿ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಸಲ್ಲಿಸಿದರೂ,ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆಯ ಬಳಿಕ ರಸ್ತೆ ಕಾಂಕ್ರಿಟೀಕರಣ ಮಾಡುತ್ತೇವೆ ಎನ್ನುವ ಕಾರ್ಪೋರೇಟರ್ ಇನ್ನು ಇತ್ತ ಸುಳಿದಿಲ್ಲ. ರಸ್ತೆ ದುರಸ್ತಿಗೊಳಿಸುವಂತೆ ಎಪ್ರಿಲ್ 13 ರಂದು ಡೆಪ್ಯುಟಿ ಕಮಿಷನರ್, ಮಾಜಿ ಶಾಸಕ ಜೆ.ಆರ್ ಲೋಬೋ, ಹಾಗೂ ಕಾರ್ಪೊರೇಟರ್ ಅಶೋಕ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ, ಆದರೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಲಾರೆನ್ಸ್