ಮೇ,28 : ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಬೆಂಗಳೂರು ಹೊರತುಪಡಿಸಿ ರಾಜ್ಯದೆಲ್ಲೆಡೆ ಸೋಮವಾರ ವಿಪಕ್ಷ ಬಿಜೆಪಿ ಪ್ರೇರಿತ ಬಂದ್ ಗೆ ರಾಜ್ಯದಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಜೆಪಿಯ ಪ್ರತಿಭಟನೆಗೆ ಮಾತ್ರ ಬಂದ್ ಸೀಮಿತವಾಗಿದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ, ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರಕಾರ ಬಹುಮತ ಸಾಬೀತುಪಡಿಸಿದ ದಿನವೇ ರೈತರ ಸಾಲಮನ್ನಾ ಘೋಷಿಸದಿದ್ದಲ್ಲಿ ಸೋಮವಾರ ಬಂದ್ ಹಮ್ಮಿಕೊಳ್ಳಲಾಗುವುದು ಎಂದು ವಿಪಕ್ಷ ನಾಯಕ ಯುಡಿಯೂರಪ್ಪ ಹೇಳಿದ್ದರು. ಅದರಂತೆ ಬಿಜೆಪಿ ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಿತ್ತು. ಆದರೆ ಈ ಬಂದ್ ಗೆ ರೈತ ಸಂಘಟನೆ, ಕನ್ನಡ ಪರ ಸಂಘಟನೆಗಳು ಚಿತ್ರೋಧ್ಯಮ , ಹೊಟೇಲ್ ಉದ್ಯಮ ಖಾಸಗಿ ಶಾಲಾಆಡಳಿತ ಮಂಡಳಿ ಹೀಗೆ ಹಲವು ಸಂಘಟನೆಗಳು ಬೆಂಬಲವನ್ನು ವ್ಯಕ್ತಪಡಿಸಿರಲಿಲ್ಲ.
ಇನ್ನು ತುಮಕೂರು, ಚಿತ್ರದುರ್ಗ, ಮಂಗಳೂರು, ಹಾಸನ, ಚಿಕ್ಕಮಗಳೂರು, ಕೋಲಾರ, ಶಿವಮೊಗ್ಗ, ಮಂಗಳೂರು, ಕೊಪ್ಪಳ, ಬೀದರ್, ಬೆಳಗಾವಿ, ಬಿಜಾಪುರ, ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜನ ಜೀವನ ಸಾಮಾನ್ಯ ಸ್ಥಿತಿಯಲ್ಲಿ ಸಾಗಿದೆ. ಇದೆಲ್ಲದರ ನಡುವೆ ಕೆಲವೊಂದು ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ.