ಮೇ,28 : ಕನ್ನಡ ಚಿತ್ರರಂಗದಲ್ಲಿ ಭಾರೀ ಸುದ್ದಿ ಮಾಡಿದ್ದ ಮಾರ್ಚ್ 22 ಸಿನಿಮಾದ ನಿರ್ಮಾಪಕರಾದ ದುಬೈಯ ಹೆಸರಾಂತ ಉದ್ಯಮಿ ಹರೀಶ್ ಶೇರಿಗಾರ್ ಅವರ ನಿರ್ಮಾಣದ ಮತ್ತೊಂದು ಚಿತ್ರ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಮೇ ೨೫ ರಂದು ರಾಜ್ಯಾದ್ಯಾಂತ ಬಿಡುಗಡೆಯಾಗಿದೆ.
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಚಿತ್ರದ ಅಂತಿಮ ಘಟ್ಟದಲ್ಲಿನ ಒಂದು ದೃಶ್ಯದಲ್ಲಿ ‘ಶ್ರಾವ್ಯಾ’,ಅಂದರೆ ನಟಿ ರಾಧಿಕಾ ಚೇತನ್ ಹೊಸ ಪೀಳಿಗೆಯ ದಿಟ್ಟ ಹೆಣ್ಣಿನ ಅಸ್ಮಿತೆಯ ಗಟ್ಟಿ ಬಿಂಬವಾಗಿ ಕಾಣುತ್ತಾಳೆ. ಈ ಬಿಂಬವೇ ಚಿತ್ರದ ಗುಣಾತ್ಮಕ ಅಂಶ. ಇದೇ ಅಂಶ ಚಿತ್ರ ನೋಡಿದವರನ್ನು ಕಾಡುವಂತೆಮಾಡುತ್ತದೆ. ಹೆಂಡತಿಯನ್ನು ಕಳೆದುಕೊಂಡು ಮಕ್ಕಳಿಲ್ಲದೇ ಒಂಟಿ ಜೀವನ ಸಾಗಿಸುತ್ತಿರುವ ವೃದ್ಧ ಶ್ಯಾಮ್ ಪ್ರಸಾದ್ (ಅನಂತ್ ನಾಗ್)ಅವರಿಗೆ ಮತ್ತೆ ದುಡಿಯುವ ಅನಿವಾರ್ಯತೆ ಬರುತ್ತದೆ. ಯುವಕರೇ ಹೆಚ್ಚಾಗಿರುವ , ಕಾರ್ಪೋರೇಟ್ ವಲ್ಡ್ ಎನ್ನುವ ಹೊಸ ಜಗತ್ತನ್ನು ಪ್ರವೇಶಿಸುವ ಶ್ಯಾಮ್ ಪ್ರಸಾದ್ ಅಲ್ಲಿನ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಅನ್ನುವುದು ಕಥೆಯ ಒಂದು ಭಾಗವಾಗಿದ್ದರೆ, ಮತ್ತೊಂದೆಡೆ ಶ್ರೀಮಂತ ಮಹಿಳೆಯಾಗಿ ಕಾರ್ಪೊರೇಟ್ ಸ್ಟೈಲ್ನಲ್ಲಿ ಕಂಪನಿಯ ಒಡತಿಯಾಗಿ ಕಾಣಿಸಿಕೊಳ್ಳುವ (ರಾಧಿಕಾ ಚೇತನ್) ಶ್ರಾವ್ಯಳ ಬದುಕಿನ ಒಳಹೊರಗುಗಳೊಂದಿಗೆ ಸಿನಿಮಾ ಸಾಗುತ್ತದೆ.
ಇನ್ನು ಚಿತ್ರದಲ್ಲಿ ಅನಂತ್ ನಾಗ್ ಅವರ ನಟನೆ, ಹಾಗೂ ಸಿನಿಮಾ ಕೆಲವು ಸನ್ನಿವೇಶಗಳು ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತದೆ. ಲಿವ್-ಇನ್ ರಿಲೇಶನ್ ಶಿಪ್ ಮೇಲೆ ಆಸಕ್ತರಾಗಿರುವ ಈಗಿನ ಯುವ ಜನಾಂಗಕ್ಕೆ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾದಲ್ಲಿ ಉತ್ತಮ ಸಂದೇಶ ಇದೆ. ಜಗತ್ತಿನ ಅತ್ಯಂತ ಎತ್ತರದ ಕಟ್ಟಡವಾದ ಭುರ್ಜ್ ಖಲೀಫಾದಲ್ಲಿ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಪಾತ್ರವಾಗಿದೆ.
ಟೆಕ್ನಿಕಲ್ ರಿಚ್ ಸಿನಿಮಾ
ಕಬಡ್ಡಿ ಚಿತ್ರದ ನಿರ್ದೇಶಕ ನರೇಂದ್ರ ಬಾಬು ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ಇರುವ ಈ ಚಿತ್ರಕ್ಕೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಿನ್ನಲೆ ಇರುವ ರಾಮಚಂದ್ರ ಹಡಪದ ಸಂಗೀತ ನಿಜಕ್ಕೂ ಅದ್ಬುತ. ಇನ್ನು ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣವೂ ಅಚ್ಚುಕಟ್ಟಾಗಿದೆ. ಈ ಚಿತ್ರವನ್ನು ನಿರ್ಮಾಪಕರಾಗಿ ಸುದರ್ಶನ್, ರಾಮಮೂರ್ತಿ,ದುಬೈ ಉದ್ಯಮಿ ಹರೀಶ್ ಶೇರಿಗಾರ್ ನಿರ್ಮಿಸಿದ್ದಾರೆ.