ಮಂಗಳೂರು, ಮೇ 26: ಜೂ. 1ರಿಂದ 61 ದಿನಗಳ ಕಾಲ ಮೀನುಗಾರಿಕಾ ರಜೆ ಆರಂಭವಾಗಲಿರುವ ಹಿನ್ನಲೆ ಆಳ ಸಮುದ್ರದಿಂದ ಮೀನುಗಾರಿಕಾ ದೋಣಿಗಳು ಕಡಲ ತಡಿಯತ್ತ ಮರಳುತ್ತಿವೆ.
ಮಳೆಗಾಲ ಮೀನುಗಳ ಸಂತಾನೋತ್ಪತ್ತಿಗೆ ಸೂಕ್ತ ಕಾಲವಾಗಿದ್ದು, ಈ ಹಿನ್ನಲೆಯಲ್ಲಿ ರಾಜ್ಯದ ಕರಾವಳಿಯಲ್ಲಿ ರಾಜ್ಯ ಸರಕಾರ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ವಿಧಿಸುತ್ತದೆ. ಅದರಂತೆ ಈ ಬಾರಿಯೂ ಜೂ. 1ರಿಂದ ಮೀನುಗಾರಿಕಾ ರಜೆ ಆರಂಭವಾಗಲಿದೆ.
ಇದೀಗ ಮೀನುಗಾರಿಕಾ ರಜೆ ಆರಂಭದ ಹಿನ್ನೆಲೆಯಲ್ಲಿ ಆಳ ಸಮುದ್ರಕ್ಕೆ ತೆರಳಿದ ಮೀನುಗಾರಿಕಾ ದೋಣಿಗಳು ಕಡಲ ತಡಿಯತ್ತ ಹೊರಟು ನಿಂತಿದೆ. ಹಲವು ದೋಣಿಗಳು ಈಗಾಗಲೇ ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿವೆ.
ಮಾತ್ರವಲ್ಲ ಮೀನುಗಾರಿಕೆಗೆ ಮಳೆಗಾಲ ಸೂಕ್ತ ಸಮಯವಲ್ಲ. ಕಡಲಲ್ಲಿ ಅಲೆಗಳ ರಭಸ ಹೆಚ್ಚಿರುವುದರಿಂದ ಅಪಾಯವಾಗುವ ಸಾಧ್ಯತೆ ಸಾಕಷ್ಟಿದೆ. ಸಮುದ್ರದ ಅಬ್ಬರಕ್ಕೆ ಮೀನುಗಾರಿಕೆಗೆ ತೆರಳುವ ಬೋಟ್ಗಳು ಅಪಾಯಕ್ಕೆ ಸಿಲುಕಿಕೊಂಡು ಪ್ರಾಣಾಪಾಯವಾಗಬಾರದು ಎಂಬ ಉದ್ದೇಶದಿಂದ ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆಯನ್ನು ಸರ್ಕಾರ ನಿಷೇಧಿಸುತ್ತದೆ.