ಮಂಗಳೂರು ಮೇ26: ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಪ್ರಯಾಣಿಸಲು ಯತ್ನಿಸಿದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪೋಲಿಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಬೈಲಂಗಡಿ ನಿವಾಸಿ ಸಂತೋಷ್ (30) ಬಂಧಿತ ವ್ಯಕ್ತಿ.
ಮೇ 24 ರಂದು ತಂಬನ್ ಎಂಬ ವ್ಯಕ್ತಿಯ ಪಾಸ್ ಪೋರ್ಟ್ ಬಳಸಿ ಸಂತೋಷ್ ವಿದೇಶಕ್ಕೆ ತೆರಳಲು ಯತ್ನಿಸಿದ್ದನು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಗೊಂಡ ಎಮಿಗ್ರೇಶನ್ ಅಧಿಕಾರಿಗಳು ಈತನನ್ನು ವಿಚಾರಣೆಗೆ ಒಳಪಡಿಸಿದಾಗ ನಕಲಿ ಪಾಸ್ ಪೋರ್ಟ್ ಪ್ರಸಂಗ ಬೆಳಕಿಗೆ ಬಂದಿದೆ.
ಕಳದೆ ಕೆಲ ವರ್ಷಗಳಿಂದ ಸಂತೋಶ್ ದುಬೈಯಲ್ಲಿ ಉದ್ಯೋಗದಲ್ಲಿದ್ದು, 6 ತಿಂಗಳ ಹಿಂದೆ ಇದೇ ಪಾಸ್ ಪೋರ್ಟ್ ಉಪಯೋಗಿಸಿ ಊರಿಗೆ ಆಗಮಿಸಿದ್ದನು. ಆದರೆ ನಕಲಿ ಪಾಸ್ ಪೋರ್ಟ್ ವಿಚಾರ ಯಾರ ಗಮನಕ್ಕೂ ಬಂದಿರಲಿಲ್ಲ. ಇದೀಗ ತನಿಖೆಯ ವೇಳೆ ಸಂತೋಶ್ ಕಾಸರಗೋಡು ನಿವಾಸಿಗಳಾದ ಅಬ್ದುಲ್ಲ ಹಾಗೂ ಹನೀಫ್ ಎಂಬ ಏಜೆಂಟರ ಮುಖಾಂತರ ತಂಬಾನ್ ಎಂಬವರ ಪಾಸ್ ಪೋರ್ಟ್ ದೊರಕಿತ್ತು ಎಂದು ತಿಳಿಸಿದ್ದಾನೆ.
ನ್ಯಾಯಲಯ ಆರೋಪಿಗೆ 15 ದಿನಗಳ ನ್ಯಾಯಂಗ ಬಂಧನ ವಿಧಿಸಿದೆ. ಮಾತ್ರವಲ್ಲ, ತನ್ನ ಪಾಸ್ ಪೋರ್ಟಿನಲ್ಲಿ ಇನ್ನೋರ್ವನಿಗೆ ಪ್ರಯಾಣ ಬೆಳೆಸಲು ಅನುವು ಮಾಡಿಕೊಟ್ಟ ತಂಬಾನ್ ಎಂಬಾತನ ಬಂಧನಕ್ಕೆ ಆದೇಶಿಸಿದೆ.