ಮೂಡುಬಿದಿರೆ, ಮೇ 26: ಆರೋಗ್ಯ ಸ್ಥಿತಿ ಹದಗೆಟ್ಟಿದ್ದ ತುಬು ಗರ್ಭಿಣಿ ಮುಸ್ಲಿಂ ಮಹಿಳೆಗೆ ಹಿಂದು ಯುವಕನೋರ್ವ ರಕ್ತ ನೀಡಿ ಮಾನವೀಯತೆ ಮೆರೆದ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ.
ಯೋಗೇಶ್ ಕೊಡ್ಯಡ್ಕ ಮುಸ್ಲಿಂ ಮಹಿಳೆಗೆ ರಕ್ತ ನೀಡಿ ಜೀವ ಉಳಿಸಿದ ಹಿಂದು ಯುವಕ.
ನಗರದ ಜಿ.ಎ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿ ಫಾತಿಮಾ ಅವರಿಗೆ ಹೆರಿಗೆ ಸಂದರ್ಭದಲ್ಲಿ ತುರ್ತಾಗಿ ಒಂದು ಯೂನಿಟ್ ರಕ್ತದ ಅವಶ್ಯಕತೆ ಇತ್ತು. ಶೀಘ್ರ ರಕ್ತ ಬೇಕು ಎಂದು ವೈದ್ಯರು ಕುಟುಂಸ್ಥರಿಗೆ ತಿಳಿಸಿದ್ದರು. ಆದರೆ ರಕ್ತ ಸಂಗ್ರಹಿಸಲಾಗದೆ ಗರ್ಭಿಣಿ ಫಾತಿಮಾ ಕುಟುಂಬದ ಸದಸ್ಯರು ಕಂಗಾಲಾಗಿದ್ದರು. ಮಾತ್ರವಲ್ಲ ರಕ್ತ ಪೂರೈಕೆ ಆಗದಿದ್ದರಿಂದ ಗರ್ಭಿಣಿ ಮಹಿಳೆಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು.
ಈ ವೇಳೆ ಮೂಡುಬಿದಿರೆ ಬ್ಲಡ್ ಬ್ಯಾಂಕ್ ರಕ್ತದ ಅವಶ್ಯಕತೆ ಇದೆ ಎಂದು ರಕ್ತದಾನಿಗಳಿಗೆ ಮಾಹಿತಿ ನೀಡಿ ಮನವಿ ಮಾಡಿಕೊಂಡಿತ್ತು. ಈ ಮನವಿಗೆ ಯೋಗೇಶ್ ಕೊಡ್ಯಡ್ಕ ಸ್ಪಂದಿಸಿದ್ದಾರೆ. ಬೆಳಗ್ಗೆ 5ಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಯೋಗೇಶ್ ಕೊಡ್ಯಡ್ಕ ಗರ್ಭಿಣಿಗೆ ರಕ್ತ ದಾನ ಮಾಡಿ ಮಹಿಳೆಯ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಇದೀಗ ಯೋಗೇಶ್ ಕೊಡ್ಯಡ್ಕ ಮಾಡಿದ ಪರೋಪಕಾರಿ ಕೆಲಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.