ಉಡುಪಿ, ಮೇ 26: ಕರ್ನಾಟಕ ಕರಾವಳಿಯ ವಿಶಿಷ್ಟ ಗಂಡುಕಲೆ ಯಕ್ಷಗಾನ ಇದೀಗ ವಿದೇಶಗಳಲ್ಲೂ ಸದ್ದು ಮಾಡುತ್ತಿದೆ.
ಉಡುಪಿಯ ಖ್ಯಾತ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಫ್ರಾನ್ಸ್ ದೇಶದಲ್ಲಿ ಅಲ್ಲಿನ ಪುಟ್ಟ ಮಕ್ಕಳು ಮತ್ತು ಮಹಿಳೆಯರಿಗೆ ಕನ್ನಡದ ಹೆಮ್ಮೆಯ ಕಲೆಯ ಪರಿಚಯ ಮಾಡುತ್ತಿದ್ದಾರೆ. ಒಂದು ತಿಂಗಳ ಫ್ರಾನ್ಸ್ ಪ್ರವಾಸದಲ್ಲಿರುವ ಬನ್ನಂಜೆ ಸಂಜೀವ ಸುವರ್ಣ ಮತ್ತು ಯಕ್ಷಗುರು ಶೈಲೇಶ್ ನಾಯ್ಕ್ ಜೊತೆಗೂಡಿ, ಅಲ್ಲಿನ ಮಕ್ಕಳಿಗೆ ಯಕ್ಷಗಾನದ ಹೆಜ್ಜೆಗಾರಿಕೆ ಕಲಿಸುತ್ತಿದ್ದಾರೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ಕಲೆ ವಿದೇಶಗಳಲ್ಲೂ ಕಲರವ ಮಾಡುತ್ತಿದೆ.
ಭಾರತೀಯ ಪುರಾಣಗಳ ಪರಿಚಯ ಮತ್ತು ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯ ಬಗ್ಗೆ ಸುವರ್ಣ ಅವರು ಪ್ರಾತ್ಯಕ್ಷಿಕೆಗಳನ್ನು ನೀಡುತ್ತಿದ್ದಾರೆ. ಮಾಸಾಂತ್ಯದಲ್ಲಿ ಬಣ್ಣಗಾರಿಕೆಯ ಸಹಿತ, ಯಕ್ಷಗಾನ ಪ್ರದರ್ಶನಗಳೂ ಏರ್ಪಾಟಾಗಿದೆ. ಈವರಗೆ ಐವತ್ತಕ್ಕೂ ಅಧಿಕ ದೇಶಗಳಲ್ಲಿ ಯಕ್ಷಗಾನದ ಪರಿಚಯ ಮಾಡಿರುವ ಗುರು ಸಂಜೀವ ಸುವರ್ಣರು ಇದೇ ಮೊದಲ ಬಾರಿಗೆ ಫ್ರಾನ್ಸ್ ನಲ್ಲಿ ಯಕ್ಷಗಾನ ಕಲಿಸಲು ತೆರೆಳಿದ್ದಾರೆ.