ಬೆಂಗಳೂರು, ಮೇ 25 :ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಇಂದು ಅಗ್ನಿ ಪರೀಕ್ಷೆ. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕುಮಾರ ಸ್ವಾಮಿಯವರು ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಬೇಕಿದೆ. ಅಂಕಿಸಂಖ್ಯೆಗಳಿಂದ ಹಿಡಿದು, ಶಾಸಕರ ಮೇಲಿನ ಅಂಕೆಯವರೆಗೆ ಎಲ್ಲವೂ ಸರಿಯಾಗಿದೆ ಎಂದು ಅನ್ನಿಸಿದರೂ ಪ್ರಬಲ ಪ್ರತಿಪಕ್ಷವಾಗಿ ಸವಾಲೊಡ್ಡುವ ಬಿಜೆಪಿ , ಅಥವಾ ಕೊನೆ ಘಳಿಗೆಯಲ್ಲಿ ನಾಟಕೀಯ ತಿರುವಿನ ಸಾಧ್ಯತೆ, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ.
ಇಂದು ಮಧ್ಯಾಹ್ನ 12.15ಕ್ಕೆ ಕಲಾಪ ಆರಂಭವಾಗಲಿದ್ದು ಮೊದಲು ಸ್ಪೀಕರ್ ಆಯ್ಕೆ ನಡೆಯುತ್ತದೆ. ವಿಶ್ವಾಸಮತಕ್ಕೂ ಮುನ್ನ ಸ್ಪೀಕರ್ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಿಂದ ನಾಮಪತ್ರ ಸಲ್ಲಿಕೆ ಮಾಡಿರುವ ರಮೇಶ್ ಕುಮಾರ್ ಅವರ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಸ್ಪರ್ಧೆ ತಲೆನೋವಾಗಿ ಪರಿಣಮಿಸಿದ್ದು, ವಿಶ್ವಾಸಮತಕ್ಕೂ ಮೊದಲೇ ಅಡ್ಡಮತದಾನದ ಭೀತಿ ಕೂಡ ಎದುರಾಗಿದೆ.
ವಿಶ್ವಾಸಮತಯಾಚನೆಯಲ್ಲಿ ಯಾವುದೇ ಸಂದರ್ಭ ಅಡ್ಡಿಯಾಗಬಾರದು ಹಾಗೂ ಸದಸ್ಯರಲ್ಲಿ ಅಸಮಾದಾನ ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ಬಹುಮತ ಗಳಿಸಿದ ಬಳಿಕವೇ ಸಂಪುಟ ರಚನೆಗೆ ನಿರ್ಧರಿಸಲಾಗಿದೆ. ವಿಶ್ವಾಸಮತ ನಿರ್ಣಯದ ಪರ ಮತ ಹಾಕುವಂತೆ ಎರಡೂ ಪಕ್ಷದ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ. ವಿಶ್ವಾಸಮತ ಸಾಬೀತು ಪಡಿಸಿದ ಬಳಿಕವಷ್ಟೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕೃತವಾಗಿ ಕಾರ್ಯಾರಂಭಿಸಲಿದೆ