ಮೇ, 24: ದೇವರನಾಡನ್ನೇ ಕಂಗೆಡಿಸಿದ್ದ ನಿಫಾ ವೈರಸ್ ಗೆ ಬಲಿಯಾಗಿದ್ದ ಕೇರಳದ ನರ್ಸ್ ಲಿನಿ ಬಗ್ಗೆ ಪತಿ ಸಜೀತ್ ಮಾಹಿತಿ ಹಂಚಿಕೊಂಡಿದ್ದು, ಆಕೆಯನ್ನು ಕಳೆದುಕೊಂಡು ನಮ್ಮ ಪುಟ್ಟ ಕುಟುಂಬ ಕಂಗೆಟ್ಟಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ನನ್ನ 5 ಮತ್ತು 2 ವರ್ಷದ ಮಕ್ಕಳು ಇಂದಿಗೂ ಅಮ್ಮ ಲಿನಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಅಮ್ಮ ಯಾವಾಗ ಬರುತ್ತಾಳೆಂದು ನನ್ನಲ್ಲಿ ಪ್ರಶ್ನಿಸುವಾಗ ನನಗೆ ಮಾತುಗಳೇ ಹೊರಡುತ್ತಿಲ್ಲ.. ಆಕೆಯನ್ನು ನೋಡಲೆಂದು ಬಹ್ರೇನ್ನಲ್ಲಿ ಕೆಲಸ ಮಾಡುತ್ತಿದ್ದ ನಾನು ಬಂದಿದ್ದು, ಭಾನುವಾರದಂದು ಕೇವಲ ೨ ನಿಮಿಷಗಳಷ್ಟು ಮಾತ್ರ ಆಕೆಯನ್ನು ನೋಡಲು ಅವಕಾಶ ಲಭಿಸಿತ್ತು.
ನಾನು ಆಕೆಯನ್ನು ನೋಡುವಾಗ ಆಕ್ಸಿಜನ್ ಮಾಸ್ಕ್ನಿಂದ ಲಿನಿ ಮುಖವನ್ನು ಮುಚ್ಚಲಾಗಿತ್ತು. ಆದ್ದರಿಂದ ಆಕೆಯೊಂದಿಗೆ ಮಾತನಾಡಲಾಗಲಿಲ್ಲ. ಬಳಿಕ ಅವಳ ಮೇಲೆ ಕೈಯಿಟ್ಟಾಗ ಪ್ರಜ್ಞೆ ಬಂತು. ನಿಜಕ್ಕೂ ನರ್ಸ್ಗಳದ್ದು ತುಂಬಾ ಕಷ್ಟದ ಕೆಲಸ . ನಾನು ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆ.
ತನ್ನ ವೃತ್ತಿಯನ್ನು ಪ್ರೀತಿಸುತ್ತಿದ್ದ ಆಕೆ ಬುಧವಾರದಂದು ನನಗೆ ಫೋನ್ ಜ್ವರ ಬರುವ ಲಕ್ಷಣಗಳಿವೆ ಎಂದಿದ್ದಳು. ನಾನು ರಜೆ ತೆಗೆದುಕೊಳ್ಳುವಂತೆ ಹೇಳಿದ್ದರೂ, ಅಲಕ್ಷಿಸಿದ ಆಕೆ ಆಸ್ಪತ್ರೆಯಲ್ಲಿ ಬಹಳಷ್ಟು ರೋಗಿಗಳಿರುವುದರಿಂದ ರಜೆ ಅಸಾಧ್ಯ ಎಂದು ತನ್ನ ಆರೋಗ್ಯದ ಕಡೆ ಗಮನ ನೀಡದೆ ಕರ್ತವ್ಯಕ್ಕೆ ಹಾಜರಾಗಿ, ರೋಗಿಗಳ ಶುಶ್ರೂಷೆಯಲ್ಲಿ ತೊಡಗಿದ್ದಳು ಎನ್ನುತ್ತಾರೆ ಸಜೀಶ್ . ಇಂದಿಗೂ ಲಿನಿ ಮಕ್ಕಳು ಮಾತ್ರ ಕೆಲಸಕ್ಕೆ ತೆರಳಿದ ಅಮ್ಮ ಬರುತ್ತಾಳೆಂದು ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದಾರೆ..