ಬೆಂಗಳೂರು, ಮೇ 24 : ನೂತನ ಮುಖ್ಯಮಂತ್ರಿಯಾಗಿ ಹೆಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭ ಕಾರ್ಯಕ್ರಮಕ್ಕೆ ಆಗಮಿಸಿದ ವಿವಿಐಪಿಗಳಿಗೆ ಬೆಂಗಳೂರಿನ ಸಂಚಾರ ದಟ್ಟಣೆಯ ಬಿಸಿತಟ್ಟಿದೆ. ಇದು ಸ್ವತಃ ಪ್ರಮಾಣವಚನ ಸ್ವೀಕರಿಸಲು ಹೊರಟಿದ್ದ ಕುಮಾರಸ್ವಾಮಿ ಬಿಟ್ಟಿಲ್ಲ ಅನ್ನೋದು ವಿಶೇಷ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಚಂದ್ರಬಾಬು ನಾಯ್ಡು ಹೀಗೆ ಹೆಚ್ಚಿನ ನಾಯಕರು ಸಿಲಿಕಾನ್ ಸಿಟಿಯ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು.
ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ತುಸು ಹೆಚ್ಚೇ ತಟ್ಟಿದೆ. ಹೀಗಾಗಿ ಬ್ಯಾನರ್ಜಿ ಕೆಲ ಮೀಟರ್ ಗಳಷ್ಟು ದೂರ ನಡೆದು ವೇದಿಕೆಗೆ ಆಗಮಿಸಿದ್ದಾರೆ. ಈ ಬಗ್ಗೆ ಮಮತಾ ಬ್ಯಾನರ್ಜಿ ಮಾಜಿ ಪ್ರಧಾನಿ ದೇವೇಗೌಡರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಡಿಐಜಿ ನೀಲಮಣಿ ರಾಜು ಅವರಿಗೂ ದೂರು ಸಲ್ಲಿಸಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿ ಆಸನ ಸ್ವೀಕರಿಸಿದ ಬಳಿಕವೂ ಅಸಮಧಾನದಿಂದ ಇದ್ದ ಮಮತಾ ಸಹ ಮುಖಂಡರೊಡನೆ ಬೇಸರ ವ್ಯಕ್ತಪಡಿಸಿದ್ದರು.
ಪ್ರಮಾಣ ವಚನ ಸಮಾರಂಭಕ್ಕಾಗಿ ಮಧ್ಯಾಹ್ನ 2 ಗಂಟೆಯಿಂದಲೂ ಕಾರ್ಯಕರ್ತರು ವಿಧಾನಸೌಧದತ್ತ ಬರಲು ಆರಂಭಿಸಿದ್ದರು. ಈ ಹೊತ್ತಿಗಾಗಲೇ ಮಳೆ ಆರಂಭವಾಗಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವಂತೆ ಮಾಡಿತ್ತು. ವಿವಿಐಪಿಗಳ ಸ್ಥಿತಿ ಈ ರೀತಿಯಾದರೆ, ಇನ್ನು ಸಾಮಾನ್ಯ ವಾಹನ ಸವಾರರ ಪಾಡಂತೂ ಹೇಳತೀರದಂತಾಗಿತ್ತು.