ಮಂಗಳೂರು, ಮೇ 24 : ಅರಬ್ಬಿ ಸಮುದ್ರದಲ್ಲಿ ಮೆಕ್ನು ಹೆಸರಿನ ಮತ್ತೊಂದು ಪ್ರಬಲ ಚಂಡಮಾರುತ ಸೃಷ್ಟಿಯಾಗಿದ್ದು, ಕಡಲು ಪ್ರಕ್ಷುಬ್ದಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾಗರರು ಮೇ 26ರ ತನಕ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅರಬ್ಬಿ ಸಮುದ್ರದ ನೈರುತ್ಯ ದಿಕ್ಕಿನಲ್ಲಿ ಮೆಕ್ನು ಚಂಡಮಾರುತ ಕೇಂದ್ರೀಕೃತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡು ಪಶ್ಚಿಮ ಮಧ್ಯ ದಿಕ್ಕಿನತ್ತ ಚಲಿಸುವ ಮುನ್ಸೂಚನೆ ಇದೆ . ಇನ್ನು ಇದರ ಪರಿಣಾಮ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಗಂಟೆಗೆ 150ರಿಂದ 160 ಕಿ. ಮೀ. ವೇಗದಲ್ಲಿ ಗಾಳಿ ಬೀಸೋದ್ರಿಂದ ಸಮುದ್ರದಲ್ಲಿ ಅಬ್ಬರ ಹೆಚ್ಚಿರಲಿದೆ.
ಪ್ರಸ್ತುತ ಈ ಚಂಡಮಾರುತ ಭಾರತದ ಕರಾವಳಿಯಿಂದ ಒಮಾನ್ ಕಡೆಗೆ ಚಲಿಸುತ್ತಿದೆ. ಆದರೆ ಒಂದೊಮ್ಮೆ ಚಂಡಮಾರುತ ತನ್ನ ದಿಕ್ಕು ಬದಲಾಯಿಸಿಕೊಂಡರೆ ಕರ್ನಾಟಕ ಕರಾವಳಿಯತ್ತ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೆಕ್ನು ಚಂಡಮಾರುತದ ಪರಿಣಾಮವಾಗಿ ಕರಾವಳಿ ಕರ್ನಾಟಕದಲ್ಲಿ ಅಂದರೆ ದಕ್ಷಿಣ ಕನ್ನಡ ಉಡುಪಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.