ಬೆಂಗಳೂರು, ಮೇ 23: ಪ್ರಾದೇಶಿಕ ಪಕ್ಷದ ನಾಯಕರು ಒಗ್ಗಟ್ಟಾಗಿ ದೇಶದಲ್ಲಿ ತೃತೀಯ ರಂಗದಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿಯ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಹೇಳಿರಬಹುದು. ಹಾಗೆಂದು ಕೈಕಟ್ಟಿ ಕುಳಿತುಕೊಳ್ಳುವವರು ನಾವಲ್ಲ . ಒಗ್ಗಟ್ಟು ಪ್ರದರ್ಶಿಸಲೆಂದು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಾಕ್ಷಿಯಾಗಲು ಬೆಂಗಳೂರಿಗೆ ಬಂದಿದ್ದೇವೆಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಬುಧವಾರ ಹೇಳಿದ್ದಾರೆ.
ನಗರಕ್ಕೆ ಆಗಮಿಸಿರುವ ಚಂದ್ರಬಾಬು ನಾಯ್ಡು ಹಾಗೂ ಮಮತಾ ಬ್ಯಾನರ್ಜಿಯವರು ಮಾಧ್ಯಮದೊಂದಿಗೆ ಮಾತನಾಡಿ, ಪ್ರಾದೇಶಿಕ ಪಕ್ಷಗಳನ್ನು ಶಕ್ತಿಯುತವಾಗಿ ಮಾಡುವುದು ನಮ್ಮ ಕೆಲಸ. ಪ್ರಾದೇಶಿಕ ಪಕ್ಷಗಳು ಬಲಗೊಂಡರೆ ದೇಶದಲ್ಲಿ ಉತ್ತಮ ಆಡಳಿತ ನೀಡುವ ಸರ್ಕಾರ ರಚಿಸಬಹುದು. ಹೀಗಾಗಿ ನಮ್ಮಲ್ಲಿರುವ ಒಗ್ಗಟ್ಟನ್ನು ಪ್ರದರ್ಶಿಸಲು, ರಾಷ್ಟ್ರೀಯ ಹಿತಾಸಕ್ತಿಗಾಗಿ ಭವಿಷ್ಯದಲ್ಲಿ ಒಟ್ಟಾಗಿ ಕೆಲಸ ಮಾಡಲು ಹಾಗೂ ಸ್ಥಳೀಯ ಪಕ್ಷಗಳ ಶಕ್ತಿಯನ್ನು ಹೆಚ್ಚಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೇವೆಂದು ಹೇಳಿದ್ದಾರೆ. ಕಾಂಗ್ರೆಸ್ ಬಲಿಷ್ಟ ರಾಷ್ಟ್ರೀಯ ಪಕ್ಷವಾದರೂ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಸರ್ಕಾರ ರಚಿಸಲು ಸಹಕಾರ ನೀಡಿದ್ದು, ಉತ್ತಮ ಬೆಳವಣಿಗೆ ಎಂದರು.