ಕಾರ್ಕಳ, ಮೇ 22 : ಎರ್ಲಪ್ಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ಕ್ಷೇತ್ರಕ್ಕೆ ಮಂಗಳವಾರದಂದು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ರವಿಶಾಸ್ತ್ರಿ ಭೇಟಿ ನೀಡಿದ್ದರು. ಪುತ್ರ ಸಂತಾನಭಿವೃದ್ಧಿ ಭಾಗ್ಯ ಕರುಣಿಸಿದ ಹರಕೆ ತೀರಿಸುವ ಹಿನ್ನಲೆಯಲ್ಲಿ ಕಳೆದ 10 ವರ್ಷಗಳಿಂದ ಇದೇ ಕ್ಷೇತ್ರ ಅಗಮಿಸುತ್ತಿದ್ದಾರೆ. ಗಮನಾರ್ಹವೆಂದರೆ ರವಿಶಾಸ್ತ್ರಿ ಅವರು ಮೂಲತಃ ಇದೇ ಗ್ರಾಮಕ್ಕೆ ಸೇರಿದವರಾಗಿದ್ದು, ಬಳಿಕ ಅವರ ಪೂರ್ವಿಕರು ಕರ್ವಾಲಿನಿಂದ ವಲಸೆ ಹೋಗಿದ್ದರು. ಕುಟುಂಬಸ್ಥರು ಆರಾಧಿಸಿಕೊಂಡು ಬರುವಂತಹ ನಾಗಸನ್ನಿಧಿ ಇದೇ ಕ್ಷೇತ್ರದಲ್ಲಿದೆ. ಇದೇ ಮೂಲನಾಗ ಪೂಜೆಯ ನಂತರ ಶಾಸ್ತ್ರಿ ಸಂತಾನ ಪಡೆದಿದ್ದು, ಇದೇ ನಂಬಿಕೆಯಲ್ಲಿ ವರ್ಷಕ್ಕೊಮ್ಮೆ ತಂಬಿಲ ತಪ್ಪದೆ ಅರ್ಪಿಸುತ್ತಿದ್ದಾರೆ.
ವಿಷ್ಣು ಮೂರ್ತಿ ದೇವರಿಗೆ ಹೂವಿನ ಪೂಜೆ, ನಾಗನಿಗೆ ಪಂಚಾಮೃತಭಿಷೇಕ ಸೇವೆಯನ್ನು ನೆರವೇರಿಸಿದರು. ಮಧ್ಯಾಹ್ನ ಸಹಭೋಜನದಲ್ಲಿ ಪಾಲ್ಗೊಂಡರು. ಪತ್ರಕರ್ತ ಮನೋಹರ್ ಪ್ರಸಾದ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.