ಕುಂದಾಪುರ, ಮೇ 22: ಬಿಜೆಪಿಯ ಅಪಪ್ರಚಾರ, ಮೋದಿಯ ಹೆಸರು ಬಳಸಿಕೊಂಡು ಮತ ಕೇಳಿದ್ದರಿಂದ ನಾವು ಸೋತಿರಬಹುದು. ಆದರೆ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಂಡು ಸಮ್ಮೀಶ್ರ ಸರ್ಕಾರವನ್ನು ರಾಜ್ಯದಲ್ಲಿ ನೀಡುತ್ತಿದ್ದೇವೆ ಎನ್ನುವುದು ಸಂತಸ ಪಡಬೇಕಾದ ವಿಚಾರ. ಇವತ್ತು ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದಿರ ಬಹುದು. ಆದರೆ ಒಟ್ಟು ಮತ ಗಳಿಕೆಯಲ್ಲಿ ಕಾಂಗ್ರೆಸ್ 38% ಮತ ಪಡೆದಿದೆ. ಬಿಜೆಪಿ ಪಡೆದಿದ್ದು 36% ಅಷ್ಟೆ. ಜೆಡಿಎಸ್ 16%ಮತ ಪಡೆದಿದೆ. ರಾಜ್ಯದಲ್ಲಿ ಮತಗಳ ವಿಂಗಡಣೆಯಾಗಿದೆ ಎಂಬುದನ್ನು ನಾವು ಗಮನಿಸಿಬೇಕು. ಕಾಂಗ್ರೆಸ್ ಪಕ್ಷ ಸೋಲನ್ನು ಸವಾಲಾಗಿ ಸ್ವೀಕರಿಸುತ್ತದೆ. ಕಾರ್ಯಕರ್ತರುಗಳು ದೃತಿಗೆಡಬೇಕಾದ ಅವಶ್ಯಕತೆ ಇಲ್ಲ ಎಂದು ಕೆ.ಪಿ.ಸಿ.ಸಿ ಕಾರ್ಯದರ್ಶಿ ಎಂ.ಎ ಗಫೂರ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಕುಂದಾಪುರದ ವತಿಯಿಂದ ಕುಂದಾಪುರದ ಆರ್.ಎನ್.ಶೆಟ್ಟಿ ಮಿನಿ ಹಾಲ್ನಲ್ಲಿ ನಡೆದ ಕಾರ್ಯಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಕೇಶ ಮಲ್ಲಿಯಂಥಹ ಯುವ ಸಮರ್ಥ ಅಭ್ಯರ್ಥಿ ಸೋತಿರುವುದು ದುರಾದೃಷ್ಟಕರ. ಆದರೂ ಅವರಿಗೆ 47029 ಮತಗಳನ್ನು ಮತದಾರರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತೆ ಪ್ರಬಲವಾಗಲಿದೆ. ಕಾರ್ಯಕರ್ತರು ಮತ್ತೆ ಉತ್ಸಾಹದಿಂದ ಕೆಲಸ ಮಾಡಬೇಕು ಎಂದರು.ಅಭ್ಯರ್ಥಿ ರಾಕೇಶ ಮಲ್ಲಿ ಮಾತನಾಡಿ, ನಾನು ಕ್ಷೇತ್ರದ ಜನತೆಗೆ ಬೇಕಾ ಬೇಡವಾ ಎನ್ನುವುದನ್ನು ನಿರ್ಧರಿಸಿ. ನಿಮಗೆ ನಾನು ಅಗತ್ಯವಿದ್ದರೆ ನಾನು ಕ್ಷೇತ್ರದಲ್ಲಿಯೇ ಇದ್ದು ನಿಮ್ಮ ಸೇವೆ ಮಾಡುತ್ತೇನೆ ಎಂದರು.
ಎಐಸಿಸಿ ಸದಸ್ಯ ಅಮೃತ ಶೆಣೈ ಮಾತನಾಡಿ, ಎಂಬತ್ತರ ದಶಕದಲ್ಲಿಯೇ ದಿ.ರಾಜೀವ ಗಾಂಧಿಯವರು ಬಿಜೆಪಿಯವರ ವಿರೋಧದ ನಡುವೆ ಭಾರತಕ್ಕೆ ಕಂಪ್ಯೂಟರ್ ಪರಿಚಯಿಸಿದರು. ಈಗ ಕರಾವಳಿ ಭಾಗದಿಂದಲೇ ಸಾವಿರಾರು ಕಂಪ್ಯೂಟರ್ ಸಾಪ್ಟ್ವೇರ್ ಇಂಜಿನಿಯರ್ಗಳು ದೇಶವಿದೇಶಗಳಲ್ಲಿ ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಮೀಸಲಾತಿಯನ್ನು ತಂದು ದೇಶದ ಕಟ್ಟಕಡೆಯ ವ್ಯಕ್ತಿಗೂ ಕೂಡಾ ರಾಜಕೀಯದ ಸ್ಥಾನಮಾನ ಕಲ್ಪಿಸಿದ್ದು ರಾಜೀವ ಗಾಂಧಿಯವರ ಸಾಧನೆ. ಇದನ್ನೆಲ್ಲ ಯುವ ಜನರಿಗೆ ತಿಳಿಸಬೇಕು. ಆದರೆ ಇವತ್ತು ಬಿಜೆಪಿಗರು ಹೇಳುವ ಸುಳ್ಳನ್ನೇ ಯುವಜನತೆ ನಿಜವೆಂದು ನಂಬಿದ್ದಾರೆ. ಹಾಗಾಗಿ ನಮಗೆ ಸೋಲಾಗಿದೆ ಎಂದರು.
ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಮಾಣಿಗೋಪಾಲ, ಜಿಲ್ಲಾ ಕಾಂಗ್ರೆಸ್ನ ಬಿ.ಹಿರಿಯಣ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಪುತ್ರನ್, ಪಕ್ಷದ ಮುಖಂಡರಾದ ಕೃಷ್ಣಾದೇವ ಕಾರಂತ, ದೇವಕಿ ಸಣ್ಣಯ್ಯ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ ಶೇರುಗಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಛಿತಾರ್ಥ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.