ಧರ್ಮಸ್ಥಳ, ಮೇ 22 : ಮೇ 23 ರ ಬುಧವಾರ ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿರುವ ಎಚ್.ಡಿ ಕುಮಾರಸ್ವಾಮಿ ರೈತನ ಸಾಲದ ಕುರಿತು ಗೊಂದಲಕಾರಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಪೂರ್ಣ ಬಹುಮತ ಬಂದರೆ ಮಾತ್ರ ನಾನು ರಾಜ್ಯದ ರೈತರ ಸಾಲ ಮನ್ನಾ ಎಂದಿದ್ದೆ. ಆದರೆ ರಾಜ್ಯದ ಜನತೆ ಸಂಪೂರ್ಣ ಬಹುಮತ ಕೊಟ್ಟಿಲ್ಲ ಹೀಗಾಗಿ ರೈತರ ಸಾಲ ಮಾಡುವ ಬಗ್ಗೆ ತಕ್ಷಣಕ್ಕೆ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ರೈತರಿಗೆ ಸಹಾಯಕಾರಿಯಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದರು . ಮೇ 22 ರ ಮಂಗಳವಾರ ಧರ್ಮಸ್ಥಳದ ಶ್ರೀ ಮಂಜುನಾಥನ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದ ಬಹುಮತ ಸಾಬೀತಾದ ಬಳಿಕ ರೈತರಿಗೆ ಉತ್ತಮವಾದ ಯೋಜನೆ ಜಾರಿಗೆ ತರುವ ಪ್ರಯತ್ನ ಮಾಡುತ್ತೇನೆ ಎಂದರು. ಇನ್ನು ಎತ್ತಿನ ಹೊಳೆ ಯೋಜನೆ ತಡೆಯುವ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು ಎತ್ತಿನಹೊಳೆ ಯೋಜನೆಯನ್ನು ಸ್ಥಗಿತಗೊಳಿಸುತ್ತೇನೆಂದು ಹೇಳಿಲ್ಲ ಆದರೆ ಈ ಯೋಜನೆಯಲ್ಲಿರುವ ಅಕ್ರಮಗಳನ್ನು ತಡೆಯುತ್ತೇನೆ. ಯಾರಿಂದಲೇ ಆಗಲಿ ಅರಣ್ಯ ಪ್ರಕೃತಿಯ ವಿನಾಶ ನಡೆಯಲು ನಾನು ಬಿಡೋದಿಲ್ಲ ಎಂದು ಹೇಳಿದರು .
ನಾಡಿನಲ್ಲಿ ಉತ್ತಮ ಮಳೆ ಬೆಳೆ ಹಾಗೂ ಕಾಂಗ್ರೆಸ್ ಜೆಡಿಎಸ್ ಪ್ರಣಾಳಿಕೆ ಜಾರಿಗೆ ತರಲು ಹಣಕಾಸು ಸದೃಢವಾಗಲೆಂದು ಶ್ರೀ ಮಂಜುನಾಥನಲ್ಲಿ ಪ್ರಾರ್ಥಿಸಿದ್ದು, ಕರಾವಳಿ ಜನತೆ ಸೋದರ ಮನೋಭಾವದಲ್ಲಿ ಬದುಕಬೇಕೆಂದು ಮನವಿ ಮಾಡಿಕೊಂಡರು. ಕರಾವಳಿಯಲ್ಲಿ ಯಾವುದೇ ರೀತಿಯ ದ್ವೇಷದ ರಾಜಕಾರಣಕ್ಕೆ ಅಸ್ಪದ ಕೊಡಬೇಡಿ ಕರಾವಳಿ ಜನತೆ ಯಾವುದೇ ಸಮಸ್ಯೆ ಇದ್ದರೂ ನನ್ನನ್ನು ಸಂಪರ್ಕಿಸಬಹುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು .