ಮೈಸೂರು, ಮೇ 21 : ಅಪವಿತ್ರ ಮೈತ್ರಿ ಹೆಚ್ಚು ದಿನ ಬಾಳಿಕೆಯಲ್ಲಿ ಇರಲು ಸಾಧ್ಯವೇ ಇಲ್ಲ ಹೀಗಾಗಿ ಆಂತರಿಕ ಕಿತ್ತಾಟದಿಂದಲ್ಲೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಕೆಲವೇ ತಿಂಗಳಲ್ಲಿ ಪತನಗೊಳ್ಳಲಿದೆ. ವಾಮಮಾರ್ಗದ ಮೂಲಕ ಅಧಿಕಾರಕ್ಕೇರಿದ ಜೆಡಿಎಸ್-ಕಾಂಗ್ರೆಸ್ ಕುಸಿಯುವುದನ್ನು ನೋಡಲು ರಾಜ್ಯದ ಜನತೆ ಕಾತರದಿಂದ ಕಾಯುತ್ತಿದ್ದಾರೆ ಎಂದು ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕುಮಾರ್ ಬಂಗಾರಪ್ಪ, ಜನಾಭಿಪ್ರಾಯಕ್ಕೆ ವಿರುದ್ಧವಾಗಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ರಚನೆ ಮಾಡಲು ಮುಂದಾಗಿವೆ. ಅಧಿಕಾರಕ್ಕಾಗಿ ಜೊತೆಯಾದವರ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದರು.
ಇಲ್ಲಿಯವರೆಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವೆಲ್ಲ ಕಸರತ್ತು ಮಾಡಿದ್ದಾರೆ ಎಂದು, ರಾಜ್ಯದ ಜನತೆ ನೋಡಿದ್ದಾರೆ. ಜೆಡಿಎಸ್ 38 ಸ್ಥಾನ ಪಡೆದರೂ 20 ಜಿಲ್ಲೆಗಳಲ್ಲಿ ಖಾತೆ ತೆರೆದಿಲ್ಲ. ಇನ್ನು ಕಾಂಗ್ರೆಸ್ 122 ಸ್ಥಾನದಿಂದ 78 ಸ್ಥಾನಕ್ಕೆ ಕುಸಿದಿದೆ. ಆದರೂ ದುರಾಸೆಯಿಂದ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿಯೇ ನಾವೇನು ಎಂಬುವುದನ್ನ ತೋರಿಸ್ತೀವಿ ಎಂದು ಸವಾಲು ಹಾಕಿದರು.